ಚಾಂಪಿಯನ್ಸ್ ಟ್ರೋಫಿ: ಬುಮ್ರಾ ಭಾಗವಹಿಸುವ ಕುರಿತು ಸ್ಪಷ್ಟತೆ ಇಲ್ಲ

ಜಸ್‌ಪ್ರಿತ್ ಬುಮ್ರಾ | PC : PTI
ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಜಸ್‌ಪ್ರಿತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಆದರೆ ಅವರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಸ್ಪಷ್ಟತೆ ಇಲ್ಲ.
ಹರ್ಷಿತ್ ರಾಣಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದೊಂದಿಗೆ ಇರಲಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಕನಿಷ್ಠ 2ರಲ್ಲಿ ಬುಮ್ರಾ ಲಭ್ಯ ಇರುವ ಕುರಿತು ನಿರೀಕ್ಷೆ ಇಲ್ಲ. ಚಾಂಪಿಯನ್ಸ್ ಟ್ರೋಫಿ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಬುಮ್ರಾ ಫೆಬ್ರವರಿ 2ರಂದು ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದು, ಆ ನಂತರವೇ ಅವರ ಭವಿಷ್ಯದ ಕ್ರಮದ ಕುರಿತು ನಿರ್ಧರಿಸಲಾಗುತ್ತದೆ.
ಐದು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೇಗದ ಬೌಲರ್ ಬುಮ್ರಾಗೆ ತಿಳಿಸಲಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಮತ್ತೊಂದು ಸುತ್ತಿನ ಸ್ಕ್ಯಾನಿಂಗ್‌ನ ಬಳಿಕವೇ ವೈದ್ಯಕೀಯ ತಂಡ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟತೆ ಪಡೆಯಲಿದೆ. ಬುಮ್ರಾ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಇನ್ನೂ ಖಚಿತತೆ ಇಲ್ಲ ಎಂದು ಅಗರ್ಕರ್ ಹಾಗೂ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಬುಮ್ರಾ ಅಲಭ್ಯತೆಯು ವೇಗದ ಬೌಲಿಂಗ್ ದಾಳಿಯ ಮೇಲೂ ಪ್ರಭಾವಬೀರಲಿದೆ.