ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ಹೋಗದಿದ್ದರೆ ಪಾಕಿಸ್ತಾನ ಕ್ರೀಡಾ ಪಂಚಾಯಿತಿ ನ್ಯಾಯಲಯಕ್ಕೆ?

Update: 2024-11-10 16:14 GMT

PC ; PTI

ಹೊಸದಿಲ್ಲಿ : 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸುವುದಕ್ಕಾಗಿ ಭಾರತದ ವಿರುದ್ಧ ಪಾಕಿಸ್ತಾನವು ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್)ಕ್ಕೆ ಹೋಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಲ್ಗೊಳ್ಳುವ ಬಗ್ಗೆ ಭಾರೀ ಊಹಾಪೋಹಗಳು ನಡೆಯುತ್ತಿವೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದಕ್ಕಾಗಿ ಪಾಕಿಸ್ತಾನಿ ಕ್ರಿಕೆಟ್ ತಂಡವು ಭಾರತಕ್ಕೆ ಬಂದಿತ್ತಾದರೂ, 2025ರಲ್ಲಿ ಭಾರತವು ಪಾಕಿಸ್ತಾನಕ್ಕೆ ಹೋಗುವುದೇ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ‘ಹೈಬ್ರಿಡ್’ ಮಾದರಿಯನ್ನು ಅನುಸರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಸೂಚಿಸಿದೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಈ ಮಾದರಿಯ ಪ್ರಕಾರ, ಭಾರತವು ತನ್ನ ಪಂದ್ಯಗಳನ್ನು ದುಬೈಯಲ್ಲಿ ಆಡುತ್ತದೆ.

ಆದರೆ, ಇಂಥ ಯಾವುದೇ ಸೂಚನೆ ಬಿಸಿಸಿಐಯಿಂದ ಬಂದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ಮುಹ್ಸಿನ್ ನಖ್ವಿ ಹೇಳಿದ್ದಾರೆ. ಪಂದ್ಯಾವಳಿಯ ಯಾವುದೇ ಪಂದ್ಯಗಳನ್ನು ದೇಶದಿಂದ ಹೊರಗೆ ಆಡಲಾಗುವುದಿಲ್ಲ ಎಂಬ ತನ್ನ ನಿಲುವಿಗೆ ಪಾಕಿಸ್ತಾನವು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದಾಗಿ ಬಿಸಿಸಿಐಯು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ತಿಳಿಸಿದೆ ಎಂಬುದಾಗಿ ಪಿಟಿಐ ವರದಿ ಮಾಡಿತ್ತು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತವು ಪಾಕಿಸ್ತಾನಕ್ಕೆ ಬರದಿದ್ದರೆ, ಮುಂದಿನ ಕ್ರಮಕ್ಕಾಗಿ ತಾನು ಪಾಕಿಸ್ತಾನ ಸರಕಾರದೊಡನೆ ಸಮಾಲೋಚನೆ ಮಾಡಬೇಕಾಗುತ್ತದೆ ಎಂದು ಆ ದೇಶದ ಆಂತರಿಕ ಸಚಿವರೂ ಆಗಿರುವ ನಖ್ವಿ ಹೇಳಿದ್ದಾರೆ.

ಭಾರತ ಪಾಕಿಸ್ತಾನದಲ್ಲಿ ಆಡದಿದ್ದರೆ, ಕ್ರೀಡಾ ಪಂಚಾಯಿತಿ ನ್ಯಾಯಾಲಯಕ್ಕೆ ಹೋಗುವ ಬಗ್ಗೆ ಪಾಕಿಸ್ತಾನವು ನಿರ್ಧರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News