ಸೌದಿ ಅರೇಬಿಯಾ ಲೀಗ್: ಅಶ್ಲೀಲವಾಗಿ ವರ್ತಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪಂದ್ಯದಿಂದ ಅಮಾನತು
ಸೌದಿ ಅರೇಬಿಯಾ: ಅಲ್-ನಾಸರ್ ತಂಡವು ಅಲ್ ಶಬಾಬ್ ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ಅಶ್ಲೀಲ ವರ್ತನೆ ತೋರಿದ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಸೌದಿ ಫುಟ್ ಬಾಲ್ ಫೆಡರೇಷನ್ ನ ಶಿಸ್ತು ಮತ್ತು ನೀತಿ ಸಮಿತಿಯು ಬುಧವಾರ ಪ್ರಕಟಿಸಿದೆ.
ರವಿವಾರ ಪಂದ್ಯ ಮುಕ್ತಾಯಗೊಂಡ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ಶಬಾಬ್ ತಂಡದ ಬೆಂಬಲಿಗರತ್ತ ಅಶ್ಲೀಲವಾಗಿ ಬೆರಳನ್ನು ತೋರಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಸೆರೆಯಾಗಿದೆ.
ಹಿನ್ನೆಲೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಸ್ಪರ್ಧಿ ಆಟಗಾರ ‘ಮೆಸ್ಸಿ’ ಘೋಷಣೆ ಕೇಳಿ ಬರುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದಾಗಿದೆ.
ಪೋರ್ಚುಗೀಸ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಫುಟ್ ಬಾಲ್ ಫೆಡರೇಷನ್ ಗೆ 10,000 ಸೌದಿ ರಿಯಲ್ಸ್ (2,666 ಡಾಲರ್) ಹಾಗೂ ದೂರು ದಾಖಲಿಸಿದ ಶುಲ್ಕವಾಗಿ ಅಲ್ ಶಬಾಬ್ ತಂಡಕ್ಕೆ 20,000 ಸೌದಿ ರಿಯಲ್ಸ್ ಅನ್ನು ಪಾವತಿಸಬೇಕು ಎಂದು ಸಮಿತಿಯು ಸೂಚಿಸಿದೆ. ಇದರೊಂದಿಗೆ, ಈ ನಿರ್ಣಯವು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲೂ ಇದೇ ರೀತಿಯ ಅಶ್ಲೀಲ ವರ್ತನೆ ತೋರಿದ್ದ 39 ವರ್ಷದ ರೊನಾಲ್ಡೊ, ತಾವು ಪ್ರತಿನಿಧಿಸುತ್ತಿದ್ದ ಅಲ್ ನಾಸರ್ ತಂಡವು ಅಲ್ ಹಿಲಾಲ್ ತಂಡದ ವಿರುದ್ಧ 2-0 ಅಂತರದಲ್ಲಿ ಪರಾಭವಗೊಂಡಿದ್ದಾಗ ಇಂತಹದೇ ವರ್ತನೆ ತೋರಿ ಟೀಕೆಗೆ ಗುರಿಯಾಗಿದ್ದರು.