ದುಬೈ ಚಾಂಪಿಯನ್ ಶಿಪ್: ಸುಮಿತ್ ನಾಗಲ್ ಗೆ ವೈಲ್ಡ್ ಕಾರ್ಡ್
ಹೊಸದಿಲ್ಲಿ: ಭಾರತದ ನಂ.1 ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ನಡೆಯುವ ದುಬೈ ಚಾಂಪಿಯನ್ ಶಿಪ್ ಎಟಿಪಿ 500 ಟೂರ್ನಿಯ ಪ್ರಧಾನ ಸುತ್ತಿಗೆ ವೈಲ್ಡ್ ಕಾರ್ಡ್ ಸ್ವೀಕರಿಸಿದ್ದಾರೆ.
ನಾಗಲ್ ಇಟಲಿಯ ವಿಶ್ವದ ನಂ.49ನೇ ಆಟಗಾರ ಲೊರೆಂರೊ ಸೊನೆಗೊರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಅಂತಿಮ-16ರ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ರನ್ನು ಎದುರಿಸುವ ಸಾಧ್ಯತೆಯಿದೆ.
26ರ ಹರೆಯದ ನಾಗಲ್ ಪ್ರಸ್ತುತ 101ನೇ ರ‍್ಯಾಂಕಿನಲ್ಲಿದ್ದಾರೆ. ಕಳೆದ ತಿಂಗಳು ಚೆನ್ನೈನಲ್ಲಿ ವೃತ್ತಿಜೀವನದ 5ನೇ ಚಾಲೆಂಜರ್ ಪ್ರಶಸ್ತಿ ಜಯಿಸಿದ ನಂತರ ಎಟಿಪಿ ರ‍್ಯಾಂಕಿಂಗ್ ನಲ್ಲಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದಾರೆ.
ಈ ವರ್ಷಾರಂಭದಲ್ಲಿ ನಾಗಲ್ ಆಸ್ಟ್ರೇಲಿಯನ್ ಓಪನ್ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದರು. ಮೊದಲ ಸುತ್ತಿನಲ್ಲಿ 31ನೇ ಶ್ರೇಯಾಂಕದ ಕಝಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ರನ್ನು ಸೋಲಿಸಿದ್ದರು. ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 35 ವರ್ಷಗಳಲ್ಲಿ ಮೊದಲ ಬಾರಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.