ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಹೀನಾಯ ಸೋಲು: ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿದ ಸರಕಾರ
ಕೊಲಂಬೊ: ಶ್ರೀಲಂಕಾ ಸರಕಾರವು ತನ್ನ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸಿದ್ದು, ಹಂಗಾಮಿ ಸಮಿತಿಯನ್ನು ನೇಮಿಸಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರ ತಿಳಿಸಿದೆ.
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶ್ರೀಲಂಕಾವು ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 7 ಲೀಗ್ ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿದೆ. ಸೆಮಿ ಫೈನಲ್ ಸ್ಪರ್ಧೆಯಿಂದ ಹೊರ ಬಿದ್ದಿದೆ. ಆತಿಥೇಯ ಭಾರತ ವಿರುದ್ಧ ಗುರುವಾರ ಶ್ರೀಲಂಕಾ ತಂಡ 302 ರನ್ ಅಂತರದಿಂದ ಹೀನಾಯವಾಗಿ ಸೋತ ನಂತರ ಕೋಪಗೊಂಡಿರುವ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಆಡಳಿತ ಮಂಡಳಿಯಾದ ಶ್ರೀಲಂಕಾ ಕ್ರಿಕೆಟ್ ಅನ್ನು ದೇಶದ್ರೋಹಿ ಹಾಗೂ ಭ್ರಷ್ಟ ಎಂದು ಶುಕ್ರವಾರದ ಹೇಳಿಕೆಯೊಂದರಲ್ಲಿ ಕರೆದಿರುವ ಕ್ರೀಡಾ ಸಚಿವ ರೋಶನ್ ರಣಸಿಂಗ್, ಕ್ರಿಕೆಟ್ ಮಂಡಳಿಯ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ, ಕ್ರಿಕೆಟ್ ಮಂಡಳಿಯ 2ನೇ ಅತ್ಯುನ್ನತ ಅಧಿಕಾರಿ ಮೋಹನ್ ಡಿಸಿಲ್ವಾ ಅವರು ತಮ್ಮ ಪ್ರಧಾನ ಕಚೇರಿಯ ಮುಂದೆ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಶನಿವಾರ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.
ಸಚಿವರು ಸೋಮವಾರ ಕ್ರಿಕೆಟ್ ಮಂಡಳಿಯ ಉಳಿದ ಸದಸ್ಯರನ್ನು ವಜಾಗೊಳಿಸಿದ್ದಾರೆ. ವಿಶ್ವಕಪ್ ವಿಜೇತ ಮಾಜಿ ನಾಯಕ ಅರ್ಜುನ ರಣತುಂಗ ಅಧ್ಯಕ್ಷತೆಯ ಮಧ್ಯಂತರ ಸಮಿತಿಯನ್ನು ನೇಮಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಏಳು ಸದಸ್ಯರ ಸಮಿತಿಯಲ್ಲಿ ರಣತುಂಗ ಅವರೊಂದಿಗೆ ಸುಪ್ರೀಂಕೋರ್ಟ್ ನ ಇಬ್ಬರು ನಿವೃತ್ತ ನ್ಯಾಯಾಧೀಶರು ಸೇರಿಕೊಳ್ಳಲಿದ್ದಾರೆ.