ಆಸೀಸ್ ಸ್ಫೋಟಕ ಬ್ಯಾಟಿಂಗ್: ತತ್ತರಿಸಿದ ಪಾಕಿಸ್ತಾನ
ಬೆಂಗಳೂರು:ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯ ಪಾಕಿಸ್ತಾನಕ್ಕೆ ಆಸ್ಟ್ರೇಲಿಯ 368 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ ನಾಯಕನ ತೀರ್ಮಾನ ತಪ್ಪು ಎಂಬಂತೆ ಬ್ಯಾಟ್ ಬೀಸಿದ ಆಸೀಸ್ ಆರಂಭಿಕ ಬ್ಯಾಟರ್ ಗಳು ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. 259 ರನ್ ಗಳ ಬೃಹತ್ ಜೊತೆಯಾಟ ಕಟ್ಟಿದ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಪರಸ್ಪರ ಸ್ಪೋಟಕ ಶತಕ ಬಾರಿಸಿ ಪಾಕ್ ಬೌಲರ್ ಗಳನ್ನು ಕಂಗೆಡಿಸಿದರು. ಆಸೀಸ್ ಪರ ಮಿಷೆಲ್ ಮಾರ್ಷ್ 10 ಬೌಂಡರಿ 9 ಸಿಕ್ಸರ್ ಸಹಿತ 121 ಗಳಿಸಿದರು. ಆದರೆ 33.5 ಓವರ್ ನಲ್ಲಿ ಶಾಹೀನ್ ಆಫ್ರಿದಿ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ತಮ್ಮ ಅದ್ಭುತ ಇನ್ನಿಂಗ್ಸ್ ಮುಗಿಸಿದರು. ಆಕ್ರಮಣಕಾರಿ ಯಾಗಿ ಬ್ಯಾಟ್ ಬೀಸಿದ್ದ ಡೇವಿಡ್ ವಾರ್ನರ್ 14 ಬೌಂಡರಿ 9 ಸಿಕ್ಸರ್ ಸಹಿತ 131 ಸ್ಟ್ರೈಕ್ ರೇಟ್ ನಲ್ಲಿ 163 ರನ್ ಬಾರಿಸುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಬ್ಯಾಟಿಂಗ್ ಸ್ವರ್ಗ ಎಂಬುದನ್ನು ಸಾಬೀತು ಮಾಡಿದರು. ಹ್ಯಾರಿಸ್ ರವೂಫ್ ಬೌಲಿಂಗ್ ನಲ್ಲಿ ಶದಾಬ್ ಖಾನ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಬಳಿಕ ಬ್ಯಾಟಿಂಗ್ ಬಂದ ಬ್ಯಾಟರ್ ಗಳು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಗ್ಲೇನ್ ಮಾಕ್ಸ್ ವೆಲ್ ಶೂನ್ಯಕ್ಕೆ ಶಾಹೀನ್ ಆಫ್ರಿದಿ ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಸ್ಮಿತ್ 7 ರನ್ ಗೆ ಕಾಟ್ ಅಂಡ್ ಬೌಲ್ಡ್ ಆದರು. ಜೋಸ್ ಇಂಗ್ಲಿಸ್ 13 ರನ್ ಗಳಿಸಿ ಮತ್ತೆ ಹ್ಯಾರಿಸ್ ರವೂಫ್ ಗೆ ವಿಕೆಟ್ ನೀಡಿದರು. ಮಾರ್ಕಸ್ ಸ್ಟೋನಿಷ್ 21 ರನ್ ಗೆ ಶಾಹೀನ್ ಆಫ್ರಿದಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆದರು. ಮಾರ್ನುಸ್ ಲಬುಶೇನ್ 8, ಸ್ಟಾರ್ಕ್ 2, ಹೇಝಲ್ ವುಡ್ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದರು. ಪ್ಯಾಟ್ ಕಮಿನ್ಸ್ 6 ರನ್ ಗಳಿಸಿದ್ದರು. ಝಾಂಪ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 5 ವಿಕೆಟ್ ಸಾಧನೆ ಮಾಡಿದರು.ಹ್ಯಾರಿಸ್ ರವೂಫ್ 3, ಉಸಾಮ ಮಿರ್ 1 ವಿಕೆಟ್ ಕಬಳಿಸಿದರು. ಶಾಹೀನ್ ಅಫ್ರಿದಿ 10 ಒವರ್ ಗಳಲ್ಲಿ ಒಂದು ಮೇಡನ್ ಸಹಿತ, 54 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ 2023 ರ ವಿಶ್ವಕಪ್ ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.