ಮೊದಲ ಟೆಸ್ಟ್: ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ ಬಿಗಿ ಹಿಡಿತ
ವೆಲ್ಲಿಂಗ್ಟನ್: ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಭರ್ಜರಿ ಬ್ಯಾಟಿಂಗ್(ಅಜೇಯ 174 ರನ್, 275 ಎಸೆತ) ಹಾಗೂ ನಾಥನ್ ಲಿಯೊನ್(4-43) ನೇತೃತ್ವದ ಬೌಲರ್ಗಳ ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಆಸ್ಟ್ರೇಲಿಯದ ಕ್ಯಾಮರೂನ್ ಗ್ರೀನ್ ಹಾಗೂ ಜೋಶ್ ಹೇಝಲ್ವುಡ್(22 ರನ್, 62 ಎಸೆತ) ನ್ಯೂಝಿಲ್ಯಾಂಡ್ ವಿರುದ್ಧ 10ನೇ ವಿಕೆಟ್ಗೆ ದಾಖಲೆಯ 116 ರನ್ ಜೊತೆಯಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯ 2ನೇ ದಿನದಾಟವಾದ ಶುಕ್ರವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ 383 ರನ್ ಗಳಿಸಿದೆ.
ಗ್ರೀನ್ ಅವರ 275 ಎಸೆತಗಳ ಮ್ಯಾರಥಾನ್ ಇನಿಂಗ್ಸ್ ನಲ್ಲಿ 23 ಬೌಂಡರಿ ಹಾಗೂ 5 ಸಿಕ್ಸರ್ಗಳಿವೆ. ಜೋಶ್ ಹೇಝಲ್ವುಡ್ ಬ್ಯಾಟ್ ಹಾಗೂ ಬಾಲ್ ನಲ್ಲಿ ನಿರ್ಣಾಯಕ ಕೊಡುಗೆ ನೀಡಿ ಆಸ್ಟ್ರೇಲಿಯ ಪ್ರಾಬಲ್ಯ ಸಾಧಿಸಲು ನೆರವಾಗಿದ್ದಾರೆ.
ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್ ನಲ್ಲಿ 383 ರನ್ ಗಳಿಸಿದ ನಂತರ ಆತಿಥೇಯ ನ್ಯೂಝಿಲ್ಯಾಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 43.1 ಓವರ್ಗಳಲ್ಲಿ ಕೇವಲ 179 ರನ್ ಗೆ ಆಲೌಟ್ ಮಾಡಿದೆ.
ಗ್ಲೆನ್ ಫಿಲಿಪ್ಸ್ 71 ರನ್(70 ಎಸೆತ, 13 ಬೌಂಡರಿ) ಗಳಿಸಿದ ಹೊರತಾಗಿಯೂ ನ್ಯೂಝಿಲ್ಯಾಂಡ್ ತಂಡ ಆಸ್ಟ್ರೇಲಿಯದ ಸ್ಪಿನ್ನರ್ ಲಿಯೊನ್ ಹಾಗೂ ವೇಗದ ಬೌಲರ್ ಜೋಶ್ ಹೇಝಲ್ವುಡ್(2-55) ದಾಳಿಗೆ ಪರದಾಟ ನಡೆಸಿ ಕ್ಷಿಪ್ರವಾಗಿ ವಿಕೆಟ್ ಗಳನ್ನು ಕಳೆದುಕೊಂಡಿದೆ.
ಫಾಲೋ ಆನ್ ಹೇರದ ಆಸ್ಟ್ರೇಲಿಯ ಎರಡನೇ ಇನಿಂಗ್ಸ್ ಆರಂಭಿಸಿದ್ದು 13 ರನ್ ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಕಂಡಿದೆ. ಸ್ಟೀವ್ ಸ್ಮಿತ್ (0)ಹಾಗೂ ಮಾರ್ನಸ್ ಲ್ಯಾಬುಶೇನ್(2 ರನ್) ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯ ಸದ್ಯ 217 ರನ್ ಮುನ್ನಡೆಯಲ್ಲಿದೆ.
ಆಸ್ಟ್ರೇಲಿಯವು 3ನೇ ದಿನದಾಟದಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ನ್ಯೂಝಿಲ್ಯಾಂಡ್ ಮರು ಹೋರಾಟ ನೀಡಿ ಸರಣಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳಲು ಬಯಸಿದೆ.