ಫ್ರೆಂಚ್ ಓಪನ್: ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಫೈನಲ್‌ಗೆ
ಪ್ಯಾರಿಸ್: ಅಗ್ರ ಶ್ರೇಯಾಂಕದ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 2024ರ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಫೈನಲ್‌ನಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸೆಮಿ ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಸಾತ್ವಿಕ್ ಹಾಗೂ ಚಿರಾಗ್ ಹಾಲಿ ವಿಶ್ವ ಚಾಂಪಿಯನ್‌ಗಳಾದ ದಕ್ಷಿಣ ಕೊರಿಯಾದ ಕಾಂಗ್ ಮಿನ್‌ಹ್ಯೂಕ್ ಹಾಗೂ ಸಿಯೊ ಸೆವುಂಗ್ಜೆ ಅವರನ್ನು 21-13, 21-16 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.
ಮೊದಲ ಗೇಮ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರರು ಕಠಿಣ ಸವಾಲೊಡ್ಡಿದ್ದು 5-5ರಿಂದ ಸಮಬಲಗೊಳಿಸಿದರು. ಸಾತ್ವಿಕ್ ಹಾಗೂ ಚಿರಾಗ್ ತಕ್ಷಣವೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು ಸತತ ಆರು ಪಾಯಿಂಟ್ಸ್ ಗಳಿಸಿದರು. ಆ ನಂತರ ಹಿಂತಿರುಗಿ ನೋಡಿಲ್ಲ.
ಎರಡನೇ ಗೇಮ್‌ನಲ್ಲೂ ಸಾತ್ವಿಕ್ ಹಾಗೂ ಚಿರಾಗ್ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಕಾಂಗ್ ಹಾಗೂ ಸೆಯೊ ಮರಳಿ ಹೋರಾಡಲು ಯತ್ನಿಸಿದರೂ ಸಾತ್ವಿಕ್ ಹಾಗೂ ಚಿರಾಗ್ ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಶಕ್ತರಾದರು. 40 ನಿಮಿಷಗಳ ಹೋರಾಟದಲ್ಲಿ ಭಾರತೀಯ ಜೋಡಿ ವಿಜಯಶಾಲಿಯಾಯಿತು.
ಸಾತ್ವಿಕ್ ಹಾಗೂ ಚಿರಾಗ್ ಫೈನಲ್‌ನಲ್ಲಿ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲಿರುವ ಜಪಾನ್‌ನ ಟಕುರೊ ಹೊಕಿ/ಯುಗೊ ಕೊಬಾಯಶಿ ಹಾಗೂ ಚೈನೀಸ್ ತೈಪೆಯ ಲೀ ಜಿ-ಹುಯ್/ಯಾಂಗ್ ಪೊ-ಸುಯಾನ್‌ರನ್ನು ಎದುರಿಸಲಿದ್ದಾರೆ. ಫೈನಲ್ ಪಂದ್ಯವು ರವಿವಾರ ತಡರಾತ್ರಿ ನಡೆಯಲಿದೆ.
*ಲಕ್ಷ್ಯ ಸೇನ್‌ಗೆ ಸೋಲು
ಪುರುಷರ ಸಿಂಗಲ್ಸ್ ಸ್ಪರ್ಧಾವಳಿಯ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.19ನೇ ಆಟಗಾರ ಲಕ್ಷ್ಯ ಸೇನ್ ಸೋಲನುಭವಿಸಿ ನಿರಾಸೆಗೊಳಿಸಿದರು.
ಲಕ್ಷ್ಯ ಸೇನ್ ಥಾಯ್ಲೆಂಡ್‌ನ 8ನೇ ರ್ಯಾಂಕಿನ ಕುನ್ಲವುಟ್ ವಿಟಿಡ್‌ಸರ್ನ್ ವಿರುದ್ಧ 21-19, 13-21, 11-21 ಅಂತರದಿಂದ ಸೋತಿದ್ದಾರೆ.
ಸೇನ್ ಆರಂಭದಲ್ಲಿ ಮೊದಲ ಗೇಮ್‌ನಲ್ಲಿ 6-3 ಮುನ್ನಡೆ ಪಡೆದು ಪ್ರಾಬಲ್ಯ ಸಾಧಿಸಿದರು. ಪ್ರತಿ ಹೋರಾಟ ನೀಡಿದ ಕುನ್ಲವುಟ್ 15-15ರಿಂದ ಸಮಬಲಗೊಳಿಸಿದರು. ಸೇನ್ ತನ್ನ ಕೌಶಲ್ಯವನ್ನು ಪ್ರದರ್ಶಿಸಿ, ಶಕ್ತಿಶಾಲಿ ಸ್ಮ್ಯಾಶ್‌ಗಳ ಮೂಲಕ ಮೊದಲ ಗೇಮ್ ಅನ್ನು 21-19 ಅಂತರದಿಂದ ಜಯಿಸಿದರು.
ಸೇನ್ ಎರಡನೇ ಗೇಮ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಕುನ್ಲವುಟ್ ಮರು ಹೋರಾಡಲು ಅನುವು ಮಾಡಿಕೊಟ್ಟರು. ಥಾಯ್ಲೆಂಡ್ ಶಟ್ಲರ್ ಮೂರನೇ ಗೇಮ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ್ದು ಫೈನಲ್‌ನಲ್ಲಿ ತನ್ನ ಸ್ಥಾನ ಪಡೆದರು.
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ(ಬಿಡಬ್ಲ್ಯುಎಫ್)ಸೂಪರ್ 750 ಸ್ಫರ್ಧೆಯಾಗಿರುವ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಕಾಣಿಸಿಕೊಂಡಿರುವ ಸೇನ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸುವ ವಿಚಾರದಲ್ಲಿ ಒಂದು ಹೆಜ್ಜೆ ಇಟ್ಟಿದ್ದಾರೆ.