ಹೀರೊ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ | ಭಾರತಕ್ಕೆ ಸತತ 4ನೇ ಗೆಲುವು

Update: 2024-09-12 16:55 GMT

PC : NDTV 

ಬೀಜಿಂಗ್ : ಇಲ್ಲಿ ನಡೆಯುತ್ತಿರುವ ಹೀರೊ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಭಾರತ ಗುರುವಾರ ತನ್ನ ಸತತ ನಾಲ್ಕನೇ ಜಯವನ್ನು ದಾಖಲಿಸಿದೆ. ಇಲ್ಲಿನ ಮೋಕಿ ಹಾಕಿ ಟ್ರೇನಿಂಗ್ ಬೇಸ್‌ನಲ್ಲಿ ನಡೆದ ಪಂದ್ಯದಲ್ಲಿ ಅದು ದಕ್ಷಿಣ ಕೊರಿಯವನ್ನು 3-1 ಗೋಲುಗಳಿಂದ ಸೋಲಿಸಿದೆ.

ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅರೈಜೀತ್ ಸಿಂಗ್ ಹುಂಡಲ್ 8ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಮುನ್ನಡೆಯನ್ನು ಒದಗಿಸಿದರು.

ಈಗಾಗಲೇ ಸೆಮಿಫೈನಲ್‌ಗೆ ತೇರ್ಗಡೆಯಾಗಿರುವ ಭಾರತವು, ತನ್ನ ಲೀಗ್ ಹಂತದ ಕೊನೆಯ ಎರಡನೇ ಪಂದ್ಯವನ್ನು ಜಯಿಸಿ ಗೆಲುವಿನ ಓಟವನ್ನು ಮುಂದುವರಿಸುವ ಯೋಜನೆಯನ್ನು ಹೊಂದಿತ್ತು.

ತನ್ನ ಈ ಯೋಜನೆಯನ್ನು ಭಾರತವು ಯಶಸ್ವಿಯಾಗಿ ಕಾರ್ಯಗತಗೊಳಿಸಿತು. ಎಂಟನೇ ನಿಮಿಷದಲ್ಲಿ ಅರೈಜೀತ್ ಸಿಂಗ್ ಹುಂಡಲ್ ಅದ್ಭುತವಾದ ಗೋಲು ಬಾರಿಸುವ ಮೂಲಕ ಭಾರತದ ಗೋಲು ಖಾತೆಯನ್ನು ತೆರೆದರು.

ಒಂಭತ್ತನೇ ನಿಮಿಷದಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲೊಂದನ್ನು ಗಳಿಸಿ ತಂಡದ ಗೋಲು ಪಟ್ಟಿಯನ್ನು 2-0ಗೆ ವಿಸ್ತರಿಸಿದರು. ಇದು ಹರ್ಮನ್‌ಪ್ರೀತ್‌ರ 200ನೇ ಅಂತರರಾಷ್ಟ್ರೀಯ ಗೋಲಾಯಿತು.

ಆತಿಥೇಯ ಚೀನಾವನ್ನು 3-2 ಗೋಲುಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯವು ಭಾರತಕ್ಕೆ ಸುಲಭದಲ್ಲಿ ಜಯವನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಎರಡನೇ ಕ್ವಾರ್ಟರ್‌ನ ಕೊನೆಯ ಏಳು ನಿಮಿಷಗಳಲ್ಲಿ ಅದು ಭಾರತದ ವಿರುದ್ಧ ಪ್ರತಿದಾಳಿ ನಡೆಸಿತು. ಅಂತಿಮವಾಗಿ ಅದು 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಬುಧವಾರ ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ಗೋಲೊಂದನ್ನು ಬಾರಿಸಿದ್ದ ಜಿಹುನ್ ಯಂಗ್ ಪೆನಾಲ್ಟಿ ಕಾರ್ನರನ್ನು ಗೋಲಾಗಿಸಿದರು. ಈ ಮೂಲಕ ಅಂಕಪಟ್ಟಿಯನ್ನು 2-1ಕ್ಕೆ ಕಿರಿದುಗೊಳಿಸಿದರು.

ಮೂರನೇ ಕ್ವಾರ್ಟರ್‌ನಲ್ಲಿ, ಭಾರತ ಮತ್ತು ಕೊರಿಯಾ ಎರಡಕ್ಕೂ ತಲಾ ನಾಲ್ಕು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಆದರೆ, ಭಾರತಕ್ಕೆ ಮಾತ್ರ ಒಂದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಯಿತು. ಆ ಕಾರ್ಯವನ್ನು ಹರ್ಮನ್‌ಪ್ರೀತ್ ಸಾಧಿಸಿದರು. ಇದರೊಂದಿಗೆ ಭಾರತದ ಮುನ್ನಡೆಯು 3-1ಕ್ಕೆ ವಿಸ್ತರಿಸಿತು.

ಬಳಿಕ ಈ ಕ್ವಾರ್ಟರ್‌ನಲ್ಲಿ ಭಾರತ ತಾಳ್ಮೆಯ ಆಟವಾಡಿತು. ಅದು ಎದುರಾಳಿಯ ತಂತ್ರಗಾರಿಕೆಗಳನ್ನು ವಿಫಲಗೊಳಿಸಿತು. ಭಾರತದ ಗೋಲ್‌ಕೀಪರ್ ಕಿಶನ್ ಪಾಠಕ್ ಕೊರಿಯ ಹಲವು ಹೊಡೆತಗಳನ್ನು ಹಿಮ್ಮೆಟ್ಟಿಸಿದರು.

ನಾಲ್ಕನೇ ಕ್ವಾರ್ಟರ್‌ನಲ್ಲೂ ಭಾರತವೇ ಪ್ರಾಬಲ್ಯ ಸಾಧಿಸಿತು. ಅದೇ ವೇಳೆ, ದಕ್ಷಿಣ ಕೊರಿಯದ ಪ್ರಯತ್ನಗಳನ್ನು ಆಗ ಗೋಲ್‌ಕೀಪರ್ ಆಗಿದ್ದ ಸೂರಜ್ ಕಕೇರರ ವಿಫಲಗೊಳಿಸಿದರು.

ಭಾರತವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News