ಹಾಕಿ ಇಂಡಿಯಾ ಅವಾರ್ಡ್ಸ್ : ಹಾರ್ದಿಕ್ ಸಿಂಗ್, ಸಲಿಮಾಗೆ ಪ್ರಶಸ್ತಿ
ಹೊಸದಿಲ್ಲಿ : ಆರನೇ ವಾರ್ಷಿಕ ಹಾಕಿ ಇಂಡಿಯಾ ಅವಾರ್ಡ್ಸ್ ರವಿವಾರ ನಡೆದಿದ್ದು, ಹಾರ್ದಿಕ್ ಸಿಂಗ್ ಹಾಗೂ ಸಲಿಮಾ ಟೇಟೆ ಕ್ರಮವಾಗಿ 2023ರ ಸಾಲಿನ ವರ್ಷದ ಆಟಗಾರ ಹಾಗೂ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಒಟ್ಟು 7 ಕೋಟಿ, 56 ಲಕ್ಷ ಬಹುಮಾನ ಮೊತ್ತದಲ್ಲಿ ಈ ಹಿಂದಿನ ವರ್ಷದಲ್ಲಿ ಸಾಧನೆಗೈದಿರುವ ತಂಡಗಳು ಹಾಗೂ ಆಟಗಾರರಿಗೆ ಗೌರವ ನೀಡಲಾಗಿದೆ. 2016ರ ಜೂನಿಯರ್ ವಿಶ್ವಕಪ್ ವಿಜೇತ ಪುರುಷರ ತಂಡಕ್ಕೂ 8 ವರ್ಷಗಳ ನಂತರ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
2017ರಲ್ಲಿ ಕೊನೆಯ ಬಾರಿ ನಡೆದಿದ್ದ ಹಾಕಿ ಇಂಡಿಯಾ ಲೀಗ್(ಎಚ್ಐಎಲ್)ಅನ್ನು 2025ರಲ್ಲಿ ಪುನರಾರಂಭಿಸಲು ನಿರ್ಧರಿಸಲಾಗಿದೆ. ಐದು ವಾರಗಳ ಕಾಲ ನಡೆಯುವ ಈ ಸ್ಪರ್ಧಾವಳಿಯಲ್ಲಿ 8 ಪುರುಷರ ಹಾಗೂ 6 ಮಹಿಳೆಯರ ತಂಡಗಳು ಭಾಗವಹಿಸಲಿವೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಇದನ್ನು ಖಚಿತಪಡಿಸಿದ್ದು, 14 ಮಾಲಕರನ್ನು ಅಂತಿಮಗೊಳಿಸಲಾಗಿದೆೆ ಎಂದರು.
ಎಫ್ಐಎಚ್ ವರ್ಷದ ಆಟಗಾರನಾಗಿ ಆಯ್ಕೆಯಾಗಿದ್ದ ಹಾರ್ದಿಕ್ ಗೆ ಬಲ್ಬೀರ್ ಸಿಂಗ್ ಸೀನಿಯರ್ ಟ್ರೋಫಿ ಹಾಗೂ 25 ಲಕ್ಷ ರೂ. ನಗದು ಬಹುಮಾನ ಪ್ರದಾನಿಸಲಾಯಿತು.
ಪುರುಷರ ಏಶ್ಯನ್ ಗೇಮ್ಸ್ ವಿಜೇತ ತಂಡದ ಜೊತೆಗೆ ಜೂನಿಯರ್ ಏಶ್ಯಕಪ್ ಹಾಗೂ ಪುರುಷರ ಹಾಗೂ ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಗೌರವಿಸಲಾಯಿತು.
ಪಿ.ಆರ್.ಶ್ರೀಜೇಶ್(ವರ್ಷದ ಗೋಲ್ಕೀಪರ್), ಹರ್ಮನ್ಪ್ರೀತ್ ಸಿಂಗ್(ವರ್ಷದ ಡಿಫೆಂಡರ್), ಹಾರ್ದಿಕ್ ಸಿಂಗ್(ವರ್ಷದ ಮಿಡ್ಫೀಲ್ಡರ್), ಅಭಿಷೇಕ್(ವರ್ಷದ ಫಾರ್ವರ್ಡ್) ತಲಾ 5 ಲಕ್ಷ ರೂ. ಬಹುಮಾನ ಪಡೆದರು.
ದೀಪಿಕಾ ಸೊರೆಂಗ್(ಮಹಿಳೆಯರ ಅಂಡರ್-21 ವರ್ಷದ ಆಟಗಾರ್ತಿ) ಹಾಗೂ ಅರಾಜೀತ್ ಸಿಂಗ್(ಪುರುಷರ ಅಂಡರ್-21 ವರ್ಷದ ಆಟಗಾರ) ತಲಾ 10 ಲಕ್ಷ ರೂ. ಬಹುಮಾನ ಸ್ವೀಕರಿಸಿದರು.
ಸಲಿಮಾ ಟೇಟೆ (ವರ್ಷದ ಆಟಗಾರ್ತಿ) ಹಾಗೂ ಹಾರ್ದಿಕ್ ಸಿಂಗ್(ವರ್ಷದ ಆಟಗಾರ) ತಲಾ 25 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
ಮೇಜರ್ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಅಶೋಕ್ ಕುಮಾರ್ 30 ಲಕ್ಷ ರೂ. ಬಹುಮಾಣ ಪಡೆದರು.