ಚಾಂಪಿಯನ್ಸ್ ಟ್ರೋಫಿ ಕುರಿತ ಮಹತ್ವದ ಸಭೆ ಮುಂದೂಡಿಕೆ

Update: 2024-11-29 16:10 GMT

PC : @ICC 

ದುಬೈ: 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮಹತ್ವದ ಸಭೆಯನ್ನು ಮುಂದೂಡಲಾಗಿದೆ. ಸಭೆಯು ಶುಕ್ರವಾರ ಆನ್‌ಲೈನ್ ಮೂಲಕ ನಡೆಯಬೇಕಾಗಿತ್ತು.

ಚಾಂಪಿಯನ್ಸ್ ಟ್ರೋಫಿಯ ಆತಿಥ್ಯಕ್ಕೆ ಸಂಬಂಧಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ ನಡೆಯಲು ನಿಗದಿಯಾಗಿರುವ ಪಾಕಿಸ್ತಾನಕ್ಕೆ ತನ್ನ ತಂಡವು ಹೋಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಅದೇ ವೇಳೆ, ಹೈಬ್ರಿಡ್ ಮಾದರಿಯ (ಕೆಲವು ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವುದು) ಆತಿಥ್ಯಕ್ಕೆ ತಾನು ಸಿದ್ಧವಿಲ್ಲ ಎಂದು ಪಿಸಿಬಿ ಪ್ರತಿಕ್ರಿಯಿಸಿದೆ.

ಸಭೆಯು ಇನ್ನು ಶನಿವಾರ ನಡೆಯಲಿದೆ.

ಸಭೆಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಸಿಸಿಯ 12 ಪೂರ್ಣ ಸದಸ್ಯ ದೇಶಗಳು ಮತ್ತು ಮೂರು ಅಸೋಸಿಯೇಟ್ ದೇಶಗಳ ಪ್ರತಿನಿಧಿಗಳು ಹಾಗೂ ಓರ್ವ ಸ್ವತಂತ್ರ ನಿರ್ದೇಶಕ ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ನಡುವೆ, ದುಬೈಯಲ್ಲಿ ನಡೆದ ಐಸಿಸಿ ಕಾರ್ಯಕಾರಿ ಮಂಡಳಿಯ ತುರ್ತು ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಪಂದ್ಯಾವಳಿಯನ್ನು ‘ಹೈಬ್ರಿಡ್’ ಮಾದರಿಯಲ್ಲಿ ಏರ್ಪಡಿಸುವ ಪ್ರಸ್ತಾವವನ್ನು ಪಾಕಿಸ್ತಾನವು ಮತ್ತೊಮ್ಮೆ ತಿರಸ್ಕರಿಸಿದ ಬಳಿಕ, ಸಭೆ ಶನಿವಾರ ಇನ್ನೊಮ್ಮೆ ನಡೆಯಲಿದೆ ಎಂದು ಅದು ಹೇಳಿದೆ.

ಹೈಬ್ರಿಡ್ ಮಾದರಿಯು ಸ್ವೀಕಾರಾರ್ಹವಲ್ಲ ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮುಹ್ಸಿನ್ ನಖ್ವಿ ಸ್ಪಷ್ಟಪಡಿಸಿದ ಬಳಿಕ ಸಭೆಯು ಕ್ಷಿಪ್ರವಾಗಿ ಕೊನೆಗೊಂಡಿತು. ಸರಕಾರದ ಅನುಮೋದನೆ ಸಿಗದಿರುವ ಹಿನ್ನೆಲೆಯಲ್ಲಿ, ಭಾರತೀಯ ತಂಡಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ.

‘‘ಇಂದು ಐಸಿಸಿಯ ಸಭೆ ಸ್ವಲ್ಪ ಹೊತ್ತು ನಡೆಯಿತು. 2025ರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ಧನಾತ್ಮಕ ನಿರ್ಣಯದ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಮಂಡಳಿಯು ಶನಿವಾರ ಮತ್ತೆ ಸಭೆ ಸೇರುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳಲ್ಲಿ ಅದು ಸಭೆಗಳನ್ನು ನಡೆಸಲಿದೆ’’ ಎಂದು ಸಭೆಯಲ್ಲಿ ಭಾಗವಹಿಸಿದ ಐಸಿಸಿ ಪೂರ್ಣ ಸದಸ್ಯ ದೇಶದ ಹಿರಿಯ ಆಡಳಿತಗಾರರೊಬ್ಬರು ಪಿಟಿಐಗೆ ತಿಳಿಸಿದರು.

ಐಸಿಸಿ ಬಳಿ 2 ಆಯ್ಕೆಗಳು?

ಶನಿವಾರ ನಡೆಯಲಿರುವ ಸಭೆಯಲ್ಲಿ, ಐಸಿಸಿಯು ಎರಡು ಆಯ್ಕೆಗಳನ್ನು ಮುಂದಿಡುವ ಸಾಧ್ಯತೆ ಇದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಮೊದಲನೆಯದು, ಭಾರತದ ಗುಂಪು ಹಂತದ ಮೂರು ಪಂದ್ಯಗಳು, ಒಂದು ಸೆಮಿಫೈನಲ್ ಮತ್ತು ಪೈನಲ್ ಪಂದ್ಯಗಳನ್ನು ತಟಸ್ಥ ದೇಶವೊಂದರಲ್ಲಿ, ಅದರಲ್ಲೂ ಮುಖ್ಯವಾಗಿ ಯುಎಇಯಲ್ಲಿ ಆಡುವುದು. ಯುಎಇ ಯಾಕೆಂದರೆ ಅದು ಪಾಕಿಸ್ತಾನಕ್ಕೆ ಸಮೀಪದಲ್ಲಿದೆ. ಹಾಗಾಗಿ, ಇತರ ತಂಡಗಳಿಗೆ ಪಾಕಿಸ್ತಾನ ಮತ್ತು ಯುಎಇ ನಡುವೆ ಪ್ರಯಾಣಿಸಲು ಅನುಕೂಲವಾಗಲಿದೆ. ಎರಡನೇ ಯೋಜನೆಯೆಂದರೆ, ಭಾರತೀಯ ಕ್ರಿಕೆಟ್ ತಂಡವು ನಾಕೌಟ್ ಹಂತಕ್ಕೆ ತೇರ್ಗಡೆಗೊಳ್ಳದಿದ್ದರೆ, ಎರಡೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News