ನಾಳೆ (ಅ. 8) ಭಾರತ-ಆಸ್ಟ್ರೇಲಿಯಾ ಮುಖಾಮುಖಿ

Update: 2023-10-07 18:24 GMT

ಚೆನ್ನೈ : ಭಾರತದಲ್ಲಿ ಪ್ರಸಕ್ತ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ, ಆತಿಥೇಯ ತಂಡವು ರವಿವಾರ ಆಸ್ಟ್ರೇಲಿಯವನ್ನು ಎದುರಿಸಲಿದೆ.

ರೋಹಿತ್ ಶರ್ಮ ನೇತೃತ್ವದ ಭಾರತ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯ ಇಲ್ಲಿನ ಎಮ್.ಎ. ಚಿದಂಬರಂ ಸ್ಟೇಡಿಯಮ್ನಲ್ಲಿ ಮುಖಾಮುಖಿಯಾಗಲಿವೆ. ಈವರೆಗೆ ವಿಶ್ವಕಪ್ ನ ನಾಲ್ಕು ಪಂದ್ಯಗಳು ನಡೆದಿವೆ. ಆದರೆ, ಇಲ್ಲಿವರೆಗೆ ಸ್ಟೇಡಿಯಮ್ ಪ್ರೇಕ್ಷಕರಿಂದ ಭರ್ತಿಯಾಗಿಲ್ಲ. ಆದರೆ ಈ ಪರಿಸ್ಥಿತಿ ರವಿವಾರ ಚೆನ್ನೈಯಲ್ಲಿ ಬದಲಾಗಲಿದೆ. ವಿಶ್ವಕಪ್ ನಡೆಯುತ್ತಿದೆ ಎನ್ನುವುದು ಗೊತ್ತಾಗಲಿದೆ.

ಭಾರತದ ಸಾಮರ್ಥ್ಯವಿರುವುದು ಅದರ ವಿಶ್ವ ದರ್ಜೆಯ ಬ್ಯಾಟಿಂಗ್ ಸರದಿಯಲ್ಲಿ. ಅದೇ ವೇಳೆ, ಆಸ್ಟ್ರೇಲಿಯ ಅತ್ಯುನ್ನತ ದರ್ಜೆಯ ವೇಗದ ಬೌಲಿಂಗ್ಗೆ ಹೆಸರು ಪಡೆದಿದೆ. ಈಗ ಪ್ರಶ್ನೆ ಇರುವುದು, ಆಸ್ಟ್ರೇಲಿಯದ ವೇಗದ ಬೌಲರ್ಗಳು ಚೆನ್ನೈಯ ಉರಿಯುವ ಬಿಸಿಲನ್ನು ತಾಳಿಕೊಳ್ಳಬಲ್ಲರೇ ಎನ್ನುವುದು. ಇದು ಕೌಶಲ ಮತ್ತು ಸಾಮರ್ಥ್ಯಕ್ಕೆ ಒಂದು ಪರೀಕ್ಷೆಯಾಗಿದೆ.

ಪ್ರಸಕ್ತ ಆಸ್ಟ್ರೇಲಿಯ ತಂಡವು 1999, 2003 ಅಥವಾ 2007ರ ಆಸ್ಟ್ರೇಲಿಯ ತಂಡವಲ್ಲ. ಅದು ಈಗ ಪರಿಪೂರ್ಣ ತಂಡವಾಗಿಯೂ ಉಳಿದಿಲ್ಲ. ಸ್ಪಿನ್ ವಿಭಾಗದಲ್ಲಿ ಅದು ಸಾಕಷ್ಟು ಆಳವನ್ನು ಹೊಂದಿಲ್ಲ.

ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಸ್ಪಿನ್ ಬೌಲಿಂಗ್ ಹೆಚ್ಚಿನ ಪ್ರಭಾವವನ್ನು ಬೀರುವ ನಿರೀಕ್ಷೆಯಿದೆ. ಸ್ಪಿನ್ ವಿಭಾಗದಲ್ಲಿ ಸೈದ್ಧಾಂತಿಕವಾಗಿ ಭಾರತ ಬಲಿಷ್ಠವಾಗಿದೆ ಹೌದು. ಆದರೆ, ಅದು ಫಲಿತಾಂಶ ತರುತ್ತದೆ ಎಂದು ಖಚಿತವಾಗಿ ಹೇಳುವಂತಿಲ್ಲ. ಅದನ್ನು ತಿಳಿಯಲು ಹೆಚ್ಚು ದೂರ ಹೋಗಬೇಕಾಗಿಲ್ಲ. ಮಾರ್ಚ್ ನಲ್ಲಿ ಇದೇ ಸ್ಟೇಡಿಯಂ ನಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿತ್ತು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ, ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಅವರು ಬ್ಯಾಟಿಂಗ್ ಜೊತೆಗೆ, ಮೂರನೇ ವೇಗದ ಬೌಲರ್ ಆಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲರು.

ಡೆಂಗಿ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಶುಬ ಮನ್‌ ಗಿಲ್ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. ಅವರು ಲಭ್ಯರಾಗದಿದ್ದರೆ, ರೋಹಿತ್ ಶರ್ಮ ಜೊತೆಗೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮ (ನಾಯಕ), ಶುಬ ಮನ್‌ ಗಿಲ್/ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮುಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶಾನ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಜೋಶ್ ಹ್ಯಾಝಲ್ವುಡ್ ಮತ್ತು ಆ್ಯಡಮ್ ಝಾಂಪ.

ಸ್ಟೇಡಿಯಂ ನಲ್ಲಿ ತಂಡಗಳ ನಿರ್ವಹಣೆ

ಚೆನ್ನೈಯ ಎಮ್.ಎ. ಚಿದಂಬರಮ್ ಸ್ಟೇಡಿಯಮ್ ಏಳು ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸಿದೆ. ಈ ಪೈಕಿ ಮೂರು ಬಾರಿ ಆಸ್ಟ್ರೇಲಿಯ ಆಡಿದೆ ಹಾಗೂ ಮೂರು ಬಾರಿಯೂ ಗೆದ್ದಿದೆ.

1987ರಲ್ಲಿ, ಆಸ್ಟ್ರೇಲಿಯವು ಗುಂಪು ಹಂತದಲ್ಲಿ ಭಾರತದ ವಿರುದ್ಧ ಒಂದು ರನ್ ನಿಂದ ರೋಮಾಂಚಕಾರಿಯಾಗಿ ಗೆದ್ದಿತ್ತು ಹಾಗೂ ಝಿಂಬಾಬ್ವೆಯನ್ನು 96 ರನ್ ಗಳಿಂದ ಸೋಲಿಸಿತ್ತು. ಬಳಿಕ 1996ರಲ್ಲಿ, ಕ್ವಾರ್ಟರ್ಫೈನಲ್ ನಲ್ಲಿ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ಒಡ್ಡಿದ 287 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತ್ತು.

ಭಾರತವು ಇಲ್ಲಿ ಎರಡು ಪಂದ್ಯಗಳನ್ನು ಅಡಿದೆ. 1987ರಲ್ಲಿ ಅದು ಆಸ್ಟ್ರೇಲಿಯದ ವಿರುದ್ಧ ಒಂದು ರನ್ನಿಂದ ಸೋತರೆ, 2011ರಲ್ಲಿ ವೆಸ್ಟ್ ಇಂಡೀಸನ್ನು 80 ರನ್ ಗಳಿಂದ ಸೋಲಿಸಿತ್ತು.

2019ರ ವಿಶ್ವಕಪ್ ಬಳಿಕ, ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಈ ಸ್ಟೇಡಿಯಂ ನಲ್ಲಿ 12 ಏಕದಿನ ಪಂದ್ಯಗಳನ್ನು ಆಡಿವೆ ಮತ್ತು ತಲಾ ಆರು ಪಂದ್ಯಗಳನ್ನು ಗೆದ್ದಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News