ಸಚಿನ್ ತೆಂಡುಲ್ಕರ್, ಎಬಿಡಿ ವಿಲಿಯರ್ಸ್ ವಿಶ್ವಕಪ್ ದಾಖಲೆ ಮುರಿದ ಡೇವಿಡ್ ವಾರ್ನರ್

Update: 2023-10-08 18:20 GMT

Photo Credit: PTI

ಚೆನ್ನೈ: ಭಾರತ ವಿರುದ್ಧ ರವಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.

ವಾರ್ನರ್ ವಿಶ್ವಕಪ್ ನಲ್ಲಿ ಕೇವಲ 19 ಇನಿಂಗ್ಸ್ ಗಳಲ್ಲಿ 1,000 ರನ್ ಪೂರೈಸುವ ಮೂಲಕ ತೆಂಡುಲ್ಕರ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ತೆಂಡುಲ್ಕರ್ ಹಾಗೂ ವಿಲಿಯರ್ಸ್ 20 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

ಹಾರ್ದಿಕ್ ಪಾಂಡ್ಯ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಎಡಗೈ ಬ್ಯಾಟರ್ ವಾರ್ನರ್ ಈ ದಾಖಲೆಯನ್ನು ನಿರ್ಮಿಸಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಓರ್ವ ಶ್ರೇಷ್ಠ ಬ್ಯಾಟರ್ ಎಂದೇ ಖ್ಯಾತಿ ಪಡೆದಿರುವ ತೆಂಡುಲ್ಕರ್ ವಿಶ್ವಕಪ್ ನಲ್ಲಿ ಗರಿಷ್ಠ ರನ್(2,278 ರನ್)ಗಳಿಸಿದ್ದಾರೆ.

36ರ ವಯಸ್ಸಿನ ವಾರ್ನರ್ 151 ಏಕದಿನ ಪಂದ್ಯಗಳಲ್ಲಿ ಈಗಾಗಲೇ 6,000ಕ್ಕೂ ಅಧಿಕ ರನ್ ಗಳಿಸಿ ಆಸ್ಟ್ರೇಲಿಯದ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಈ ವಿಶ್ವಕಪ್ ವಾರ್ನರ್ ಪಾಲಿಗೆ ಕೊನೆಯ ಟೂರ್ನಿಯಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯಕ್ಕೆ ಆರನೇ ವಿಶ್ವಕಪ್ ಗೆದ್ದುಕೊಟ್ಟು ಟೂರ್ನಿಗೆ ವಿದಾಯ ಹೇಳಲು ವಾರ್ನರ್ ಬಯಸಿದ್ದಾರೆ.

ವಾರ್ನರ್ ಅವರು ಏಕದಿನ ವಿಶ್ವಕಪ್ ನಲ್ಲಿ 1,000 ರನ್ ಪೂರೈಸಿದ ಆಸ್ಟ್ರೇಲಿಯದ ನಾಲ್ಕನೇ ಬ್ಯಾಟರ್ ಆಗಿದ್ದಾರೆ. ವಾರ್ನರ್ ಅವರು ರಿಕಿ ಪಾಂಟಿಂಗ್(1,743 ರನ್), ಆ್ಯಡಮ್ ಗಿಲ್ ಕ್ರಿಸ್ಟ್(1,085 ರನ್) ಹಾಗೂ ಮಾರ್ಕ್ ವಾ(1,004 ರನ್)ಅವರಿದ್ದ ಕ್ಲಬ್ ಗೆ ಸೇರಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಕೆಲವೇ ಇನಿಂಗ್ಸ್ ನಲ್ಲಿ 1,000 ರನ್ ಗಳಿಸಿದ ಬ್ಯಾಟರ್ಗಳು

19- ಡೇವಿಡ್ ವಾರ್ನರ್

20-ಸಚಿನ್ ತೆಂಡುಲ್ಕರ್ ಹಾಗೂ ಎಡಿ ವಿಲಿಯರ್ಸ್

21-ವಿವಿ ರಿಚರ್ಡ್ಸ್ ಹಾಗೂ ಸೌರವ್ ಗಂಗುಲಿ

22-ಮಾರ್ಕ್ ವೋ

22-ಹರ್ಷಲ್ ಗಿಬ್ಸ್

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News