ಇಂಡಿಯನ್ ವೆಲ್ಸ್ ಮಾಸ್ಟರ್ಸ್: ಸುಮಿತ್ ನಾಗಲ್ ಶುಭಾರಂಭ
ಹೊಸದಿಲ್ಲಿ: ಭಾರತದ ಅಗ್ರ ರ್ಯಾಂಕಿನ ಟೆನಿಸ್ ಆಟಗಾರ ಸುಮಿತ್ ನಾಗಲ್ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ನಲ್ಲಿ ಆಡಿರುವ ತನ್ನ ಮೊತ್ತ ಮೊದಲ ಪಂದ್ಯದಲ್ಲಿ ಅಮೆರಿಕದ ವೈಲ್ಡ್ ಕಾರ್ಡ್ ಆಟಗಾರ ಸ್ಟೆಫನ್ ಡೊಸ್ಟಾನಿಕ್ ರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದ್ದಾರೆ.
ಸೋಮವಾರ ನಡೆದ ಅರ್ಹತಾ ಪಂದ್ಯಗಳ ಮೊದಲ ಸುತ್ತಿನಲ್ಲಿ ಸುಮಿತ್ ಅವರು ಡೊಸ್ಟಾನಿಕ್ ರನ್ನು 6-2, 6-2 ನೇರ ಸೆಟ್ ಗಳ ಅಂತರದಿಂದ ಮಣಿಸಿದ್ದಾರೆ.
8ನೇ ಶ್ರೇಯಾಂಕದ ನಾಗಲ್ ತನ್ನ ಕೌಶಲ್ಯವನ್ನು ಪ್ರದರ್ಶಿಸಿ ಪಂದ್ಯದುದ್ದಕ್ಕೂ ಒಂದೂ ಬ್ರೇಕ್ ಪಾಯಿಂಟ್ ಬಿಟ್ಟುಕೊಡದೆ ಕೇವಲ 68 ನಿಮಿಷಗಳಲ್ಲಿ ಗೆಲುವು ಸಂಪಾದಿಸಿದರು.
ಈ ಗೆಲುವಿನ ಮೂಲಕ ಸುಮಿತ್ ಅಂತಿಮ ಅರ್ಹತಾ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 14,400 ಯುಎಸ್ ಡಾಲರ್ ಬಹುಮಾನ ಮೊತ್ತದ ಜೊತೆಗೆ 10 ರ್ಯಾಂಕಿಂಗ್ ಪಾಯಿಂಟ್ಸ್ ಅನ್ನೂ ಗಳಿಸಿದ್ದಾರೆ.
ಸುಮಿತ್ ಇತ್ತೀಚೆಗಿನ ದಿನಗಳಲ್ಲಿ ಕೆಲವು ಗಮನಾರ್ಹ ಸಾಧನೆ ಮಾಡಿದ್ದರು. 10 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ನಲ್ಲಿ ಎರಡನೇ ಸುತ್ತಿಗೆ ತಲುಪಿದ ಭಾರತದ ಮೊದಲ ಸಿಂಗಲ್ಸ್ ಆಟಗಾರನಾಗಿ ಹೊರಹೊಮ್ಮಿದ್ದರು.
ಚೆನ್ನೈ ಚಾಲೆಂಜರ್ಸ್ ಪ್ರಶಸ್ತಿಯನ್ನು ಜಯಿಸಿದ್ದ ಸುಮಿತ್ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದರು. ಪುಣೆ ಹಾಗೂ ದುಬೈ ಟೆನಿಸ್ ಚಾಂಪಿಯನ್ ಶಿಪ್ನಲ್ಲಿ ಸುಮಿತ್ ಹಿನ್ನಡೆ ಕಂಡಿದ್ದರು.
ಸುಮಿತ್ ಎರಡನೇ ಅರ್ಹತಾ ಸುತ್ತಿನಲ್ಲಿ ಸಿಯೊಂಗ್-ಚಾನ್ ಹಾಂಗ್ ಸವಾಲನ್ನು ಎದುರಿಸಲಿದ್ದಾರೆ.
ಹಾಂಗ್ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದು ಈ ವರ್ಷ ಬೆಂಗಳೂರು ಓಪನ್ ಸಹಿತ ಎರಡು ಎಟಿಪಿ ಚಾಲೆಂಜರ್ಸ್ ಲೆವೆಲ್ ಫೈನಲ್ಸ್ ಗೆ ತಲುಪಿದ್ದರು.