ಇಂಡಿಯನ್ ವೆಲ್ಸ್ ಮಾಸ್ಟರ್ಸ್ | ಅಂತಿಮ ಅರ್ಹತಾ ಸುತ್ತಿನಲ್ಲಿ ಎಡವಿದ ಸುಮಿತ್ ನಾಗಲ್
ಇಂಡಿಯನ್ ವೆಲ್ಸ್ : ಭಾರತದ ಟೆನಿಸ್ ಆಟಗಾರ ಸುಮಿತ್ ನಾಗಲ್ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರತಿರೋಧ ಹಾಗೂ ದೃಢ ಸಂಕಲ್ಪ ಪ್ರದರ್ಶಿಸಿದರೂ ದಕ್ಷಿಣ ಕೊರಿಯಾದ ಸೆಯೊಂಗ್-ಚಾನ್ ಹಾಂಗ್ ವಿರುದ್ಧ ಸೋತಿದ್ದಾರೆ.
26ರ ಹರೆಯದ ನಾಗಲ್ ಸ್ಫೂರ್ತಿಯುತ ಹೋರಾಟ ನೀಡಿದರೂ ಮಂಗಳವಾರ ನಡೆದ ಪಂದ್ಯದಲ್ಲಿ 6-2, 2-6, 6-7(4-7) ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ಮೂಲಕ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಅರ್ಹತೆ ಗಿಟ್ಟಿಸುವ ಸುಮಿತ್ ಪ್ರಯತ್ನ ಕೈಗೂಡಲಿಲ್ಲ.
ಸುಮಿತ್ ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಸ್ಟೆಫನ್ ಡೊಸ್ಟಾನಿಕ್ ರನ್ನು ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಟೂರ್ನಮೆಂಟ್‌ನಲ್ಲಿ ಉತ್ತಮ ಆರಂಭ ಪಡೆದಿದ್ದರು. ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಭಾರತದ ನಂ.1 ಸಿಂಗಲ್ಸ್ ಆಟಗಾರ ಸುಮಿತ್ 6-2, 6-2 ನೇರ ಸೆಟ್‌ಗಳ ಅಂತರದಿಂದ ಜಯ ದಾಖಲಿಸಿದರು.
ಆದರೂ ಅಂತಿಮ ಅರ್ಹತಾ ಸುತ್ತಿನಲ್ಲಿ ಸುಮಿತ್ ಗೆಲುವು ದಾಖಲಿಸಲಿಲ್ಲ. ಈ ಹಂತಕ್ಕೆ ತಲುಪಿರುವ ಅವರು 10 ರೇಟಿಂಗ್ ಪಾಯಿಂಟ್ಸ್ ಹಾಗೂ 14,400 ಯುಎಸ್ ಡಾಲರ್ ಬಹುಮಾನ ಗೆದ್ದುಕೊಂಡಿದ್ದಾರೆ.
ಭಾರತದ ಟೆನಿಸ್ ಪಟು ಸುಮಿತ್ ಇತ್ತೀಚೆಗಿನ ದಿನಗಳಲ್ಲಿ ಕ್ರೀಡೆಯಲ್ಲಿ ಹೊಸ ಅಲೆ ಎಬ್ಬಿಸಿದ್ದರು. ದಶಕದ ನಂತರ ಆಸ್ಟ್ರೇಲಿಯನ್ ಓಪನ್‌ನಲ್ಲಿ 2ನೇ ಸುತ್ತು ತಲುಪಿದ ಭಾರತದ ಎರಡನೇ ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದರು.
ಇದೀಗ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ನಿರಾಸೆಗೊಳಿಸಿದ್ದರೂ ಸುಮಿತ್ ತನ್ನ ಪ್ರತಿರೋಧ ಹಾಗೂ ಸಾಧನೆಗಳ ಮೂಲಕ ವಿಶ್ವ ಟೆನಿಸ್‌ನಲ್ಲಿ ತನ್ನ ಘನತೆ ಹೆಚ್ಚಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಹಂತದಲ್ಲಿ ಭಾರತೀಯ ಟೆನಿಸ್ ನ ಭರವಸೆಯ ಆಟಗಾರನಾಗಿದ್ದಾರೆ.