ಗಾಯದ ಸಮಸ್ಯೆ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಜೆಮಿಮಾ ರೋಡ್ರಿಗಸ್ ಅಲಭ್ಯ
ಮುಂಬೈ: ಅಗ್ರ ಸರದಿಯ ಮಹಿಳಾ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಬೆನ್ನುನೋವಿನ ಸಮಸ್ಯೆಯ ಕಾರಣಕ್ಕೆ ಮುಂಬರುವ ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಲಭ್ಯವಿರುವುದಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಪುಣೆಯಲ್ಲಿ ಇತ್ತೀಚೆಗೆ ನಡೆದಿದ್ದ ಹಿರಿಯ ಮಹಿಳೆಯರ ಅಂತರ್-ವಲಯ ಮಲ್ಟಿ ಡೇ ಟ್ರೋಫಿಯಲ್ಲಿ ಜೆಮಿಮಾ ಬೆನ್ನುನೋವಿಗೆ ಒಳಗಾಗಿದ್ದರು. ಸದ್ಯ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತದ 16 ಸದಸ್ಯೆಯರನ್ನು ಒಳಗೊಂಡ ತಂಡವನ್ನು ಸೋಮವಾರ ಪ್ರಕಟಿಸಲಾಗುತ್ತದೆ. ತಂಡವನ್ನು ಖಾಯಂ ನಾಯಕಿ ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ ಉಪ ನಾಯಕಿಯಾಗಿರುತ್ತಾರೆ. ಆಸ್ಟ್ರೇಲಿಯದ ಟ್ರಾಯ್ ಕೂಲಿ ಬೌಲಿಂಗ್ ಕೋಚ್ ಆಗಿಯೂ, ಅಮೋಲ್ ಮಝುಂದಾರ್ ಮುಖ್ಯ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ಭಾರತ ತಂಡವು ಎಪ್ರಿಲ್ 28ರಂದು ಮೊದಲ ಟಿ20 ಪಂದ್ಯವನ್ನು ಆಡಲಿದ್ದು, ಆ ನಂತರ ಎಪ್ರಿಲ್ 30, ಮೇ 2, 6 ಹಾಗೂ 9ರಂದು ಉಳಿದ ಪಂದ್ಯಗಳನ್ನು ಆಡಲಿದೆ.
*5 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ: ಹರ್ಮನ್ ಪ್ರೀತ್ ಕೌರ್(ನಾಯಕಿ),ಸ್ಮೃತಿ ಮಂಧಾನ(ಉಪ ನಾಯಕಿ), ಶೆಫಾಲಿ ವರ್ಮಾ, ಹೇಮಲತಾ, ಸಾಜನಾ ಸಂಜೀವನ್, ರಿಚಾ ಘೋಷ್(ವಿಕೆಟ್ಕೀಪರ್), ಯಸ್ತಿಕಾ ಭಾಟಿಯ(ವಿಕೆಟ್ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ಅಮೋನ್ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್, ಆಶಾ ಶೋಭನಾ, ರೇಣುಕಾ ಸಿಂಗ್, ಟೈಟಾಸ್ ಸಾಧು.
ಬಾಂಗ್ಲಾದೇಶ-ಭಾರತ ಟಿ20 ಸರಣಿ ವೇಳಾಪಟ್ಟಿ
ಎಪ್ರಿಲ್ 28, ಮೊದಲ ಟಿ20
ಎಪ್ರಿಲ್ 30, ಎರಡನೇ ಟಿ20
ಮೇ 2, ಮೂರನೇ ಟಿ20
ಮೇ 6, ನಾಲ್ಕನೇ ಟಿ20
ಮೇ 9, ಐದನೇ ಟಿ20