ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕಾರ
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಇಂದು (ಡಿಸೆಂಬರ್ 1) ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 20ರಿಂದ ಐಸಿಸಿ ಅಧ್ಯಕ್ಷರಾಗಿದ್ದ ಗ್ರೇಗ್ ಬಾರ್ಕ್ಲೆ ಉತ್ತರಾಧಿಕಾರಿಯಾಗಿ ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಕಾರ್ಯನಿರ್ವಹಿಸಲಿದ್ದಾರೆ.
ಐಸಿಸಿ ಅಧ್ಯಕ್ಷರಾದ ನಂತರ, ಪ್ರಥಮ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಯ್ ಶಾ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೆ ಪ್ರಯತ್ನ ಹಾಗೂ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಆದ್ಯತೆ ನೀಡುವುದರತ್ತ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
“ಐಸಿಸಿ ಮುಖ್ಯಸ್ಥನ ಪಾತ್ರದಿಂದ ನಾನು ಗೌರವಕ್ಕೊಳಗಾಗಿದ್ದೇನೆ. ಐಸಿಸಿ ನಿರ್ದೇಶಕರು ಹಾಗೂ ಸದಸ್ಯರ ಬೆಂಬಲ ಮತ್ತು ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.
“ನಾವಿಂದು ವಿವಿಧ ಮಾದರಿಗಳ ಸಹ ಅಸ್ತಿತ್ವ ಹಾಗೂ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ವೇಗ ನೀಡಬೇಕಾದ ಸಂಕೀರ್ಣ ಘಟ್ಟದಲ್ಲಿದ್ದೇವೆ. ಕ್ರಿಕೆಟ್ ಜಾಗತಿಕವಾಗಿ ಭಾರಿ ಪ್ರಭಾವಶಾಲಿಯಾಗಿದ್ದು, ನಾನು ಈ ಅವಕಾಶವನ್ನು ಬಳಸಿಕೊಂಡು ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ತಂಡ ಹಾಗೂ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.