ಕಪ್ಪು ತೋಳುಪಟ್ಟಿ ಧರಿಸಿದ್ದಕ್ಕೆ ಉಸ್ಮಾನ್ ಖ್ವಾಜಾಗೆ ವಾಗ್ದಂಡನೆ!

Update: 2023-12-21 18:22 GMT

ಹೊಸದಿಲ್ಲಿ: ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕಪ್ಪು ತೋಳಪಟ್ಟಿ ಕಟ್ಟಿ ಆಡಿರುವುದಕ್ಕಾಗಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಟಗಾರ ಉಸ್ಮಾನ್ ಖ್ವಾಜಾ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಿಂದ ವಾಗ್ದಂಡನೆ ಎದುರಿಸುತ್ತಿದ್ದಾರೆ. ಇದಕ್ಕೂ ಮೊದಲು, ಗಾಝಾಕ್ಕೆ ಬೆಂಬಲ ಸೂಚಿಸುವ ಸಂದೇಶಗಳನ್ನು ತನ್ನ ಶೂನಲ್ಲಿ ಪ್ರದರ್ಶಿಸಲು ಅವರು ಬಯಸಿದ್ದಾರಾದರೂ, ಐಸಿಸಿಯ ನಿಯಮಾವಳಿಗಳ ಹಿನ್ನೆಲೆಯಲ್ಲಿ ಹಾಗೆ ಮಾಡಲು ಸಾಧ್ಯವಾಗಿರಲಿಲ್ಲ.

‘‘ಸ್ವಾತಂತ್ರ್ಯ ಎನ್ನುವುದು ಮಾನವಹಕ್ಕು’’ ಮತ್ತು ‘‘ಎಲ್ಲಾ ಜೀವಗಳು ಸಮಾನ’’ ಎಂಬುದಾಗಿ ಫೆಲೆಸ್ತೀನ್ ಧ್ವಜದ ಬಣ್ಣಗಳಲ್ಲಿ ಬರೆದ ಸಂದೇಶಗಳನ್ನು ಹೊತ್ತ ಶೂಗಳನ್ನು ಟೆಸ್ಟಿಗೂ ಮೊದಲು ನಡೆದ ತರಬೇತಿ ಅವಧಿಯಲ್ಲಿ ಹಾಕಲು ಬಯಸಿದ್ದರು. ಆದರೆ, ಧಾರ್ಮಿಕ, ರಾಜಕೀಯ ಮತ್ತು ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸುವುದನ್ನು ಐಸಿಸಿ ನಿಯಮಾವಳಿಗಳು ನಿಷೇಧಿಸುವುದರಿಂದ ಆ ಶೂಗಳನ್ನು ಧರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ಹಾಗಾಗಿ, ಅವರು ಟೆಸ್ಟ್ ಪಂದ್ಯದ ವೇಳೆ ಕಪ್ಪು ತೋಳಪಟ್ಟಿಯ ಧರಿಸಿ ಆಡಿದ್ದರು. ಅದು ಐಸಿಸಿಯ ನಿಯಮಾವಳಿಗಳಿಗೆ ವಿರುದ್ಧವಾಗಿದೆ.

‘‘ಉಸ್ಮಾನ್ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ವೈಯಕ್ತಿಕ ಸಂದೇಶ (ತೋಳಪಟ್ಟಿ)ವನ್ನು ಪ್ರದರ್ಶಿಸಿದ್ದಾರೆ. ಅದಕ್ಕಾಗಿ ಅವರು ಕ್ರಿಕೆಟ್ ಆಸ್ಟ್ರೇಲಿಯ ಮತ್ತು ಐಸಿಸಿಯಿಂದ ಪೂರ್ವಾನುಮತಿ ಪಡೆದಿಲ್ಲ’’ ಎಂದು ಐಸಿಸಿ ವಕ್ತಾರರೊಬ್ಬರು ಹೇಳಿದ್ದಾರೆ.

‘‘ಇದು ನಿಯಮಾವಳಿಯ ಉಲ್ಲಂಘನೆಯಾಗಿದೆ. ಇಂಥ ಮೊದಲ ಅಪರಾಧಕ್ಕೆ ಶಿಕ್ಷೆ ವಾಗ್ದಂಡನೆಯಾಗಿದೆ’’ ಎಂದು ಅವರು ಹೇಳಿದ್ದಾರೆ.

ಪರ್ತ್ನಲ್ಲಿ ಡಿಸೆಂಬರ್ 14ರಿಂದ 17ರವರೆಗೆ ನಡೆದ ಮೊದಲ ಟೆಸ್ಟನ್ನು ಆಸ್ಟ್ರೇಲಿಯ 360 ರನ್ ಗಳಿಂದ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News