ಗೆಲುವಿನ ಓಟ ಮುಂದುವರಿಸಿದ ಕಿವೀಸ್

Update: 2023-10-13 17:21 GMT

Photo : twitter/ICC

ಚೆನ್ನೈ: ಇಲ್ಲಿನ ಎಂ ಎ ಚಿದಂಬರಂ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 11 ನೇ ಪಂದ್ಯ ಬಾಂಗ್ಲಾದೇಶ ವಿರುದ್ಧ ನ್ಯೂಝಿಲ್ಯಾಂಡ್ ಗೆ 8 ವಿಕೆಟ್ ಗಳ ಭಾರೀ ಜಯ ಗಳಿಸಿದೆ.

ದೀರ್ಘಕಾಲ ಗಾಯದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶ ವಿರುದ್ಧ ಪಂದ್ಯದ ಮೂಲಕ ತಂಡಕ್ಕೆ ವಾಪಾಸ್ ಆಗಿದ್ದರು. ನಾಯಕನ ಆಗಮನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ, ಪರಿಣಾಮ ಸತತ 3ನೇ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.

ಬಾಂಗ್ಲಾದೇಶ ನೀಡಿದ 246 ರನ್ ಗಳ ಗುರಿ ಬೆನ್ನತ್ತಿದ ನ್ಯೂಝಿಲ್ಯಾಂಡ್ ಪ್ರಾರಂಭದಲ್ಲಿಯೇ ಆಘಾತ ಎದುರಿಸಿತು. ದ್ವಿತೀಯ ಕ್ರಮಾಂಕದ ಬ್ಯಾಟರ್ ರಚಿನ್ ರವೀಂದ್ರ ಕೇವಲ 9 ರನ್ ಗೆ ಮುಸ್ತಫಿಝುರ್ ರಹ್ಮಾನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ಆದರು. ಬಳಿಕ ಜೊತೆಯಾದ ಡೆವೊನ್ ಕಾನ್ವೆ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಡೆವೊನ್ ಕಾನ್ವೆ 3 ಬೌಂಡರಿ ಸಹಿತ 45 ರನ್ ಗಳಿಸಿರುವಾಗ ಶಾಕಿಬ್ ಎಲ್ ಬಿ ಡಬ್ಲು ಔಟ್ ಮಾಡುವ ಮೂಲಕ ಈ ಜೊತೆಯಾಟ ಮುರಿದರು.

ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಕಮ್ ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲಿಯೇ 8 ಬೌಂಡರಿ 1 ಸಿಕ್ಸರ್ ಸಹಿತ 78 ರನ್ ಗಳಿಸಿ ಆಕರ್ಷಕ ಅರ್ಧಶ ಕ ಬಾರಿಸಿ “ ರಿಟೈರ್ ಹರ್ಟ್” ಆದರು. ಬಳಿಕ ತಂಡ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಂಡ ಡರಲ್ ಮಿಚೆಲ್ 6 ಬೌಂಡರಿ 4 ಸಿಕ್ಸರ್ ಸಹಿತ ಸ್ಫೋಟಕ 89 ರನ್ ಸಿಡಿಸಿ ಅಜೇಯರಾಗಿ ತಂಡದ ಗೆಲುವಿಗೆ ಕಾರಣರಾದರು. ಗ್ಲೇನ್ ಫಿಲಿಪ್ಸ್ 16 ರನ್ ಬಾರಿಸಿ ಸಾಥ್ ನೀಡಿದರು.

ಬಾಂಗ್ಲಾದೇಶ ದೇಶ ಪರ ಮುಸ್ತಫಿಝುರ್ ರಹ್ಮಾನ್ ಹಾಗೂ ಶಾಕಿಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಬಾಂಗ್ಲಾದೇಶ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ನಿಗದಿತ 50 ಒವರ್ ಗಳಲ್ಲಿ ಬಾಂಗ್ಲಾ ಬ್ಯಾಟರ್ಸ್ 9 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿದರು. ಬ್ಯಾಟಿಂಗ್ ಗೆ ಬಂದ ಬಾಂಗ್ಲಾ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ಹಾಕಿಕೊಡುವಲ್ಲಿ ವಿಫಲರಾದರು. ಲಿಟನ್ ದಾಸ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿಯೇ ಟ್ರೆಂಟ್ ಬೊಲ್ಟ್ ಗೆ ಗೋಲ್ಡನ್ ಡಕ್ ಅಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಸೇರಿಕೊಂಡರು. ಮೆಹಿದಿ ಹಸನ್ 30 ರನ್ ಗಳಿಸಿದರೆ ಶಾಂಟೋ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಾಂಗ್ಲಾದೇಶ ತನ್ನ ಮೊದಲ ಮೂರು ವಿಕೆಟ್ ಬೇಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಾಯಕ ಶಾಕಿಬ್ ಉಲ್ ಹಸನ್ 3 ಬೌಂಡರಿ 2 ಸಿಕ್ಸರ್ ಸಹಿತ 40 ಬಾರಿಸಿ ತಂಡಕ್ಕೆ ಉತ್ತಮ ಮೊತ್ತ ಹಾಕುವ ಯೋಜನೆಯಲ್ಲಿದ್ದರು. ಆದರೆ ಲೋಕಿ ಫರ್ಗ್ಯುಸನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಟಾಮ್ ಲಾಥಮ್ ಕ್ಯಾಚ್ ತೆಗೆದುಕೊಂಡ ಪರಿಣಾಮ ಅವರು ವಿಕೆಟ್ ಕಳೆದುಕೊಂಡರು. ಬಾಂಗ್ಲಾ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಮ್ 6 ಬೌಂಡರಿ 2 ಸಿಕ್ಸರ್ ಸಹಿತ 66 ರನ್ ಗಳಿಸಿ ಸಿಡಿಸಿ ತಂಡದ ಸ್ಪರ್ಧಾತ್ಮಕ ಗುರಿ ಗೆ ರನ್ ಕೂಡಿಸಿದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಬಲಿಷ್ಠ ಸಂಘಟಿತ ನ್ಯೂಝಿಲ್ಯಾಂಡ್ ಬೌಲಿಂಗ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಳಿಲ್ಲ. ತೌಹೀದ್ ಹೃದೊಯ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ಕ್ರಮವಾಗಿ 13, 17,4 ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಗೆ ಬಾಂಗ್ಲಾ ಪರ 2 ಬೌಂಡರಿ 2 ಸಿಕ್ಸರ್ ಸಹಿತ 40 ಗಳಸಿ ಮುಹಮದುಲ್ಲಾ ತಂಡದ ಮೊತ್ತ ಹೆಚ್ಚಿಸಿದರು.

ನ್ಯೂಝಿಲ್ಯಾಂಡ್ ಪರ ಲೋಕಿ ಫರ್ಗ್ಯುಸನ್ ಪ್ರಮುಖ 3 ವಿಕೆಟ್ ಕಬಳಿಸಿದರೆ ಮಾಟ್ ಹೆನ್ರಿ ಹಾಗೂ ಟ್ರೆಂಟ್ ಬೋಲ್ಟ್ 2 ವಿಕೆಟ್ ಕಿತ್ತರು. ಗ್ಲೇನ್ ಪಿಲಿಪ್ಸ್ , ಸಾಂಟ್ನರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News