ಏಶ್ಯನ್ ಗೇಮ್ಸ್ ನಲ್ಲಿ ಭಾರತ vs ಭಾರತ ಕಿತ್ತಾಟ, ತೃತೀಯ ಲಿಂಗಿ ಎದುರು ನನ್ನ ಪದಕ ಸೋತೆ ಎಂದ ಸ್ವಪ್ನ ಬರ್ಮನ್!
ಕಂಚಿನ ಪದಕ ಜಯಿಸಿರುವ ನಂದಿನಿ ತೃತೀಯ ಲಿಂಗಿಯಾಗಿದ್ದು, ಆಕೆಗೆ ಈ ಪಂದ್ಯದಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ ಎಂದು ಪೋಸ್ಟ್ ಹಾಕುವ ಮೂಲಕ ಸ್ವಪ್ನ ವಿವಾದ ಸೃಷ್ಟಿಸಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ
ಹ್ಯಾಂಗ್ ಝೌ: ಏಶ್ಯನ್ ಗೇಮ್ಸ್ 2023ರ ಕ್ರೀಡಾಕೂಟದಲ್ಲಿ ತಮ್ಮ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲಾಗದ ಭಾರತೀಯ ಹೆಪಥ್ಲಾನ್ ಅಥ್ಲೀಟ್ ಸ್ವಪ್ನ ಬರ್ಮನ್, ಮತ್ತೊಬ್ಬ ಭಾರತೀಯ ಆಟಗಾರ್ತಿ ನಂದಿನಿ ಅಗಸರಗಿಂತ ಕೇವಲ 4 ಅಂಕ ಹಿಂದೆ ಬಿದ್ದು, 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹೀಗಾಗಿ ಮಹಿಳಾ ಹೆಪಥ್ಲಾನ್ ನಲ್ಲಿ ನಂದಿನಿ ಕಂಚಿನ ಪದಕ ಜಯಿಸಿದರೆ, ಕಳೆದ ಬಾರಿಯ ಚಾಂಪಿಯನ್ ಸ್ವಪ್ನ ಬರ್ಮನ್ ಬರಿಗೈನಲ್ಲಿ ಭಾರತಕ್ಕೆ ಮರಳುವಂತಾಗಿದೆ. ಆದರೆ, ಕಂಚಿನ ಪದಕ ಜಯಿಸಿರುವ ನಂದಿನಿ ತೃತೀಯ ಲಿಂಗಿಯಾಗಿದ್ದು, ಆಕೆಗೆ ಈ ಪಂದ್ಯದಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ ಎಂದು ಪೋಸ್ಟ್ ಹಾಕುವ ಮೂಲಕ ಸ್ವಪ್ನ ವಿವಾದ ಸೃಷ್ಟಿಸಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಪಂದ್ಯದಲ್ಲಿ 5712 ಅಂಕಗಳನ್ನು ಕ್ರೋಡೀಕರಿಸಿದ ನಂದಿನಿ ತಮ್ಮ ಜೀವಮಾನ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು. 800 ಮೀಟರ್ ನ ಹೆಪಥ್ಲಾನ್ ನ ಅಂತಿಮ ಪಂದ್ಯದಲ್ಲಿ ಮೊದಲಿಗರಾಗುವ ಮೂಲಕ ಸ್ವಪ್ನ ಬರ್ಮನ್ ರನ್ನು ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತ್ರಿಗೊಳಿಸಿಕೊಂಡರು. 800 ಮೀಟರ್ ಹೆಪಥ್ಲಾನ್ ಅಲ್ಲದೆ 200 ಮೀಟರ್ ಹೆಪಥ್ಲಾನ್ ನಲ್ಲೂ 936 ಅಂಕಗಳನ್ನು ಗಳಿಸುವ ಮೂಲಕ ನಂದಿನಿ ಪದಕ ಜಯಿಸಿದರು.
2018ರಲ್ಲಿ ಚಿನ್ನದ ಪದಕ ಜಯಿಸಿದ್ದ ಸ್ವಪ್ನ ಬರ್ಮನ್ ಅಂಗಳದಲ್ಲಿ ತಾವು ಪ್ರದರ್ಶಿಸಿದ ಸಾಧನೆಯ ಬಗ್ಗೆ ತೃಪ್ತರಾಗಿರಲಿಲ್ಲ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ವಪ್ನ ಬರ್ಮನ್, “ಚೀನಾದ ಹ್ಯಾಂಗ್ ಝೌನಲ್ಲಿ ಆಯೋಜಿಸಲಾಗಿರುವ 19ನೇ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಾನು ನನ್ನ ಏಶ್ಯನ್ ಗೇಮ್ಸ್ ಕಂಚಿನ ಪದಕವನ್ನು ತೃತೀಯ ಲಿಂಗಿ ಮಹಿಳೆ ಎದುರು ಸೋತಿದ್ದೇನೆ. ಇದು ಅಥ್ಲೆಟಿಕ್ಸ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ನನ್ನ ಪದಕ ನನಗೆ ಮರಳಿ ಬೇಕು. ದಯವಿಟ್ಟು ನನಗೆ ಸಹಾಯ ಮಾಡಿ ಮತ್ತು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.
ಈ ವರ್ಷದ ಮಾರ್ಚ್ 31ರಿಂದ ಜಾರಿಗೆ ಬಂದಿರುವ ವಿಶ್ವ ಅಥ್ಲೆಟಿಕ್ಸ್ ನಿರ್ಬಂಧಗಳ ನಿಯಮಗಳ ಪ್ರಕಾರ, ವಿಶ್ವ ಅಥ್ಲೆಟಿಕ್ಸ್ ವ್ಯಾಖ್ಯಾನಿಸಿರುವಂತೆ ಪುರುಷ ಪ್ರೌಢಿಮೆ ಹೊಂದಿರುವವರು ಮಹಿಳಾ ವಿಶ್ವ ರ್ಯಾಂಕಿಂಗ್ ಪಂದ್ಯಗಳಲ್ಲಿ ಭಾಗವಹಿಸುವಂತಿಲ್ಲ.
ಈ ನಡುವೆ, ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ Vs ಭಾರತದ ನಡುವೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ಅಥ್ಲೆಟಿಕ್ಸ್ ಅಭಿಮಾನಿಗಳು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.