ಪಾಕಿಸ್ತಾನದ ಟ್ವೆಂಟಿ-20 ಅಂತರ್ರಾಷ್ಟ್ರೀಯ ತಂಡಕ್ಕೆ ಮುಹಮ್ಮದ್ ರಿಝ್ವಾನ್ ಉಪ ನಾಯಕ
ಕರಾಚಿ: ನ್ಯೂಝಿಲ್ಯಾಂಡ್ ವಿರುದ್ಧ ಜನವರಿ 12ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗಿಂತ ಮೊದಲು ವಿಕೆಟ್ ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್ ಪಾಕಿಸ್ತಾನದ ಟ್ವೆಂಟಿ-20 ಅಂತರ್ರಾಷ್ಟ್ರೀಯ ತಂಡದ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ.
ಟ್ವೆಂಟಿ-20 ತಂಡವನ್ನು ಮುನ್ನಡೆಸಲು ಹೊಸತಾಗಿ ನೇಮಕಗೊಂಡಿರುವ ನಾಯಕ ಶಾಹೀನ್ ಶಾ ಅಫ್ರಿದಿ ಅವರೊಂದಿಗೆ ರಿಝ್ವಾನ್ ಉಪ ನಾಯಕನಾಗಿ ಕೆಲಸ ಮಾಡಲಿದ್ದಾರೆ. ಈ ರಣತಂತ್ರವು ಮುಂಬರುವ 2024ರ ಟ್ವೆಂಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ತಯಾರಿಯ ಒಂದು ಭಾಗವಾಗಿದೆ. ವಿಶ್ವಕಪ್ ಟೂರ್ನಿಯು ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರ ತನಕ ನಡೆಯಲಿದೆ.
2009ರ ಟಿ-20 ಚಾಂಪಿಯನ್ ಪಾಕಿಸ್ತಾನ ಮುಂಬರುವ ಟಿ-20 ಕ್ರಿಕೆಟ್ ಟೂರ್ನಮೆಂಟಿಗೆ ನಾಯಕತ್ವದ ಗುಂಪನ್ನು ಬಲಿಷ್ಠಗೊಳಿಸುವ ಗುರಿ ಇಟ್ಟುಕೊಂಡಿದೆ.
ಪಾಕಿಸ್ತಾನದ ಪುರುಷರ ಟಿ-20 ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸಲ್ಪಟ್ಟಿರುವುದು ನನಗೆ ಲಭಿಸಿರುವ ಗೌರವವಾಗಿದೆ. ಈ ಜವಾಬ್ದಾರಿಯನ್ನು ನೀಡಿ ನನ್ನ ಮೇಲೆ ನಂಬಿಕೆ ಇಟ್ಟಿರುವ ಪಿಸಿಬಿಗೆ ನಾನು ಧನ್ಯವಾದ ಸಲ್ಲಿಸುವೆ. ತಂಡದ ಯಶಸ್ಸಿನಲ್ಲಿ ಕೊಡುಗೆ ನೀಡಲು ನಾಯಕ, ಕೋಚಿಂಗ್ ಸಿಬ್ಬಂದಿ ಹಾಗೂ ನನ್ನ ಸಹ ಆಟಗಾರರೊಂದಿಗೆ ಆಡುವುದನ್ನು ಎದುರು ನೋಡುತ್ತಿರುವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ರಿಝ್ವಾನ್ ತಿಳಿಸಿದ್ದಾರೆ.
31ರ ವಯಸ್ಸಿನ ರಿಝ್ವಾನ್ 2015ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ 85 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ಶತಕ ಹಾಗೂ 25 ಅರ್ಧಶತಕಗಳ ಸಹಿತ ಒಟ್ಟು 2,797 ರನ್ ಕಲೆ ಹಾಕಿದ್ದಾರೆ.
ಇಷ್ಟೇ ಅಲ್ಲದೆ ರಿಝ್ವಾನ್ ವಿಕೆಟ್ ಕೀಪರ್ ಆಗಿಯೂ ತನ್ನ ಕೌಶಲ್ಯವನ್ನು ಸಾಬೀತುಪಡಿಸಿದ್ದು 41 ಕ್ಯಾಚ್ ಗಳನ್ನು ಪಡೆದಿರುವುದಲ್ಲದೆ, 11 ಸ್ಟಂಪಿಂಗ್ ಮಾಡಿದ್ದಾರೆ.
ಪಾಕಿಸ್ತಾನ ತಂಡ: ಶಾಹೀನ್ ಶಾ ಅಫ್ರಿದಿ(ನಾಯಕ), ಮುಹಮ್ಮದ್ ರಿಝ್ವಾನ್(ಉಪ ನಾಯಕ, ವಿಕೆಟ್ ಕೀಪರ್), ಆಮಿರ್ ಜಮಾಲ್, ಅಬ್ಬಾಸ್ ಅಫ್ರಿದಿ, ಆಝಮ್ ಖಾನ್(ವಿಕೆಟ್ ಕೀಪರ್), ಬಾಬರ್ ಆಝಮ್, ಫಖರ್ ಝಮಾನ್, ಹಾರಿಸ್ ರವೂಫ್, ಹಸೀಬುಲ್ಲಾ(ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಝ್, ಮುಹಮ್ಮದ್ ವಸೀಂ ಜೂನಿಯರ್, ಸಾಹಿಬ್ಝಾದಾ ಫರ್ಹಾನ್, ಸಯೀಮ್ ಅಯ್ಯೂಬ್, ಉಸಾಮಾ ಮಿರ್ ಹಾಗೂ ಝಮಾನ್ ಖಾನ್.