ದುಲೀಪ್ ಟ್ರೋಫಿ ಪಂದ್ಯದಲ್ಲಿ ಮುಶೀರ್ ಖಾನ್ ಶತಕ: ಸಂಭ್ರಮಿಸಿದ ಸರ್ಫರಾಜ್ ಖಾನ್

Update: 2024-09-05 16:41 GMT

ಮುಶೀರ್ ಖಾನ್ ,  ಸರ್ಫರಾಜ್ ಖಾನ್ | PC : X \ @BCCIdomestic

ಹೊಸದಿಲ್ಲಿ: ದುಲೀಪ್ ಟ್ರೋಫಿ ಪಂದ್ಯದಲ್ಲಿ ಗುರುವಾರ ಮುಶೀರ್ ಖಾನ್ ಮಹತ್ವದ ಘಟ್ಟದಲ್ಲಿ ಶತಕ ಬಾರಿಸಿದರು. ಅದಕ್ಕೆ ಅವರ ಸಹೋದರ ಸರ್ಫರಾಝ್ ಖಾನ್ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿ ಸಹೋದರಾಭಿಮಾನವನ್ನು ಎತ್ತಿ ತೋರಿಸಿದೆ.

ಇಂಡಿಯಾ ಎ ತಂಡದ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದ ಮೊದಲ ದಿನವಾದ ಗುರುವಾರ ಇಂಡಿಯಾ ಬಿ ತಂಡದ ಮುಶೀರ್ ಬಾರಿಸಿದ ಅಜೇಯ ಶತಕವು ತಂಡದ ಮೊದಲ ಇನಿಂಗ್ಸ್‌ಗೆ ಭದ್ರ ಬುನಾದಿಯನ್ನು ಹಾಕಿತು. ಅವರ ಶತಕದಿಂದಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಬಿ ಮೊದಲ ದಿನದಾಟದ ಕೊನೆಯ ವೇಳೆಗೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳನ್ನು ಗಳಿಸಿತು.

ಇದು ಖಾನ್ ಕುಟುಂಬದ ಸಂತಸ ಕ್ಷಣವಾಯಿತು. ಮುಶೀರ್ ಶತಕ ಬಾರಿಸುತ್ತಿದ್ದಂತೆಯೇ, ಡ್ರೆಸಿಂಗ್ ಕೋಣೆಯ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸರ್ಫರಾಝ್ ಸಂತೋಷದಿಂದ ಮೇಲೆ ಕೆಳಗೆ ಜಿಗಿಯುತ್ತಿರುವುದು ಕಾಣಿಸಿತು. ಅದಕ್ಕೂ ಮೊದಲು, ಅದೇ ತಂಡದಲ್ಲಿ ಆಡುತ್ತಿರುವ ಸರ್ಫರಾಝ್ ಖಾನ್ ಕೇವಲ 9 ರನ್‌ಗಳಿಗೆ ಔಟಾಗಿದ್ದರು. ಆ ನಿರಾಶೆಯ ಬಳಿಕ, ಅವರು ತನ್ನ ಸಹೋದರನ ಯಶಸ್ಸನ್ನು ಸಂಭ್ರಮಿಸಿದರು.

ಇಂಡಿಯಾ ಬಿ ತಂಡವು ಒಂದು ಹಂತದಲ್ಲಿ, ತನ್ನ ಮೊದಲ ಇನಿಂಗ್ಸ್‌ನಲ್ಲಿ 94 ರನ್‌ಗಳನ್ನು ಗಳಿಸುವಷ್ಟರಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ದಿನದಾಟ ಮುಗಿದಾಗ ಅವರು 227 ಎಸೆತಗಳಲ್ಲಿ 105 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರು ನವದೀಪ್ ಸೈನಿ (29 ಅಜೇಯ) ಜೊತೆಗೆ ಮುರಿಯದ 8ನೇ ವಿಕೆಟ್‌ಗೆ 108 ರನ್‌ಗಳನ್ನು ಸೇರಿಸಿದ್ದಾರೆ.

ಇಂಡಿಯಾ ‘ಡಿ’ಗೆ ಆಸರೆಯಾದ ಅಕ್ಷರ್ ಪಟೇಲ್:

ಗುರುವಾರ ಆರಂಭಗೊಂಡ ಇನ್ನೊಂದು ದುಲೀಪ್ ಟ್ರೋಫಿ ಪಂದ್ಯದ ಮೊದಲ ದಿನ ಅಕ್ಷರ್ ಪಟೇಲ್ ಇಂಡಿಯಾ ಡಿ ಪರವಾಗಿ 86 ರನ್‌ಗಳನ್ನು ಗಳಿಸಿದರು ಮತ್ತು ಬಳಿಕ ಇಂಡಿಯಾ ಸಿ ತಂಡದ ಎರಡು ಮಹತ್ವದ ವಿಕೆಟ್‌ಗಳನ್ನು ಉರುಳಿಸಿದರು.

ಇಂಡಿಯಾ ಸಿ ಬೌಲರ್‌ಗಳು ಇಂಡಿಯಾ ಡಿ ಬ್ಯಾಟಿಂಗ್‌ನ ಅಗ್ರ ಸರದಿಯನ್ನು ಧೂಳೀಪಟಗೈದರು. ಇಂಡಿಯಾ ಸಿ ಬೌಲರ್ ಅನ್ಶುಲ್ ಕಾಂಬೋಜ್ 47 ರನ್‌ಗಳನ್ನು ನೀಡಿ 2 ವಿಕೆಟ್ ಉರುಳಿಸಿದರೆ, ವಿಜಯಕುಮಾರ್ ವೈಶಾಖ್ 19 ರನ್‌ಗಳನ್ನು ಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಒಂದು ಹಂತದಲ್ಲಿ ಇಂಡಿಯಾ ಡಿ 48 ರನ್‌ಗಳನ್ನು ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅಕ್ಷರ್ 116 ಎಸೆತಗಳಲ್ಲಿ 86 ರನ್‌ಗಳನ್ನು ಗಳಿಸಿದರು. ಇಂಡಿಯಾ ಡಿ 48.3 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟಾಯಿತು.

ಬಳಿಕ, ಇಂಡಿಯಾ ಸಿ ಮೊದಲ ದಿನದ ಆಟದ ಕೊನೆಯ ವೇಳೆಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 91 ರನ್ ಗಳಿಸಿತು. ಹರ್ಷಿತ್ ರಾಣಾ ಎರಡು ವಿಕೆಟ್‌ಗಳನ್ನು ಪಡೆದರೆ, ಅಕ್ಷರ್ ಕೂಡ ಎರಡು ವಿಕೆಟ್‌ಗಳನ್ನು ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News