ಕಿವೀಸ್ ವಿರುದ್ಧ ಬಾಂಗ್ಲಾದ ಸ್ಥಾನವನ್ನು ಭದ್ರಪಡಿಸಿದ ನಜ್ಮಲ್ ಹುಸೈನ್

Update: 2023-11-30 17:10 GMT

ಸಿಲ್ಹೆಟ್: ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೈನ್ ಶಾಂಟೊ, ಗುರುವಾರ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ್ದಾರೆ.

ಬಾಂಗ್ಲಾದೇಶದ ಸಿಲ್ಹೆಟ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಕೊನೆಗೆ ಆತಿಥೇಯ ತಂಡವು 3 ವಿಕೆಟ್ಗಳ ನಷ್ಟಕ್ಕೆ 212 ರನ್ ಗಳನ್ನು ಕಲೆಹಾಕಿದೆ. ಇದರೊಂದಿಗೆ ಅದು ನ್ಯೂಝಿಲ್ಯಾಂಡ್ಗಿಂತ 205 ರನ್ಗಳ ಮುನ್ನಡೆ ಗಳಿಸಿದೆ.

ನಜ್ಮುಲ್ 104 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದು ನಾಲ್ಕು ಇನಿಂಗ್ಸ್ಗಳಲ್ಲಿ ಅವರ ಮೂರನೇ ಶತಕವಾಗಿದೆ.

ಮಾಜಿ ನಾಯಕ ಮುಶ್ಫೀಕುರ್ರಹೀಮ್ 43 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಅವರು ನಜ್ಮುಲ್ ಜೊತೆಗಿನ ಮುರಿಯದ ನಾಲ್ಕನೇ ವಿಕೆಟ್ಗೆ 96 ರನ್ಗಳನ್ನು ಸೇರಿಸಿದ್ದಾರೆ.

ಜೂನ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಈ ಹಿಂದಿನ ಟೆಸ್ಟ್ ನ ಎರಡೂ ಇನಿಂಗ್ಸ್ ಗಳಲ್ಲಿ ಅವರು ಶತಕಗಳನ್ನು ಬಾರಿಸಿದ್ದರು. ಗುರುವಾರ ಅವರು ಮೋಮಿನುಲ್ ಹಕ್ ಜೊತೆಗೆ ಮೂರನೇ ವಿಕೆಟ್ಗೆ 90 ರನ್ ಗಳನ್ನು ಸೇರಿಸಿದ್ದಾರೆ.

ಟೆಸ್ಟ್ ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಬಾಂಗ್ಲಾದೇಶದ ಮೊದಲ ಕ್ರಿಕೆಟಿಗನಾಗಿ ಅವರು ದಾಖಲೆ ನಿರ್ಮಿಸಿದ್ದಾರೆ. ಅವರ ಶತಕದಲ್ಲಿ ಈವರೆಗೆ 10 ಬೌಂಡರಿಗಳಿದ್ದವು.

ಆದರೆ, ಗುರುವಾರ ಎರಡು ರನೌಟ್ ಗಳಲ್ಲಿ ಅವರ ಪಾತ್ರವಿತ್ತು. ಅವರಿಂದಾಗಿ ರನೌಟ್ ಆದ ಎರಡನೆಯ ಆಟಗಾರ 40 ರನ್ ಗಳಿಸಿದ ಮೋಮಿನುಲ್.

ಇದಕ್ಕೂ ಮೊದಲು, ನ್ಯೂಝಿಲ್ಯಾಂಡ್ ತನ್ನ ಮೊದಲ ಇನಿಂಗ್ಸನ್ನು 317 ರನ್ ಗಳಿಗೆ ಮುಕ್ತಾಯಗೊಳಿಸಿತು. ಇದರೊಂದಿಗೆ ಅದು ಏಳು ರನ್ಗಳ ಅಲ್ಪ ಇನಿಂಗ್ಸ್ ಮುನ್ನಡೆ ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News