ಟಿ20 ವಿಶ್ವಕಪ್: ಉಗಾಂಡ 40ಕ್ಕೆ ಆಲೌಟ್, ನ್ಯೂಝಿಲ್ಯಾಂಡ್ ಗೆ ಭರ್ಜರಿ ಜಯ
ನ್ಯೂಯಾರ್ಕ್: ವಿಶ್ವಕಪ್ ಟಿ20 ಪಂದ್ಯಾವಳಿಯ ಗುಂಪು ಹಂತದ ಪಂದ್ಯಗಳು ಮುಕ್ತಾಯ ಹಂತ ತಲುಪಿವೆ. ಶನಿವಾರದ ಪಂದ್ಯದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಅನನುಭವಿ ಉಗಾಂಡ ತಂಡವನ್ನು ಕೇವಲ 40 ರನ್‍ಗಳಿಗೆ ನಿಯಂತ್ರಿಸಿ, ಟೂರ್ನಿಯ ಮೊದಲ ಜಯ ದಾಖಲಿಸಿತು. 5.2 ಓವರ್‍ಗಳಲ್ಲಿ ನ್ಯೂಝಿಲ್ಯಾಂಡ್ ತಂಡ ಗೆಲುವಿನ ಗುರಿ ತಲುಪಿತು.
ಡಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಸೂಪರ್ 8 ಹಂತ ತಲುಪಿರುವ ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಒಂದು ರನ್ ಅಂತರದ ರೋಚಕ ಜಯ ಸಾಧಿಸಿದೆ.
ಟ್ರಿನಿಡಾಡ್‍ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿದ ವಿಲಿಯಮ್ಸನ್ ನೇತೃತ್ವದ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಕಿವೀಸ್ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಉಗಾಂಡ 18.4 ಓವರ್ ಗಳಲ್ಲಿ 40 ರನ್‍ಗಳಿಗೆ ಸರ್ವಪತನ ಕಂಡಿತು. ನ್ಯೂಝಿಲ್ಯಾಂಡ್ ಪರ ಟ್ರೆಂಟ್ ಬೋಲ್ಟ್ (7ಕ್ಕೆ 2), ಟಿಮ್ ಸೌತಿ (4ಕ್ಕೆ 3), ಮಿಚೆಲ್ ಸ್ಯಾಂಟ್ನರ್ (8ಕ್ಕೆ 2) ಲೂಕಿ ಫಗ್ರ್ಯೂಸನ್ (9ಕ್ಕೆ 1), ರಚಿನ್ ರವೀಂದ್ರಾ (9ಕ್ಕೆ 2) ಹೀಗೆ ಬೌಲಿಂಗ್ ಮಾಡಿದ ಎಲ್ಲರೂ ವಿಕೆಟ್ ಪಡೆದರು.
ಕಿಂಗ್ಸ್‍ಟೌನ್‍ನ ಅರ್ಮೋಸ್ ವೇಲ್ ಮೈದಾನದಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ನೇಪಾಳ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಕೇವಲ 115 ರನ್‍ಗಳಿಗೆ ನಿಯಂತ್ರಿಸಿತ್ತು. ದೀಪೇಂದ್ರ ಸಿಂಗ್ (21ಕ್ಕೆ 3) ಮತ್ತು ಕೌಶಲ್ ಬುರ್ಟೆಲ್ (19ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ತಂಡ ಆರಂಭಿಕ ಬ್ಯಾಟ್ಸ್ ಮನ್ ರೀಝ್ ಹೆಂಡ್ರಿಕ್ (43) ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಕಲೆಹಾಕಲು ಸಾಧ್ಯವಾಯಿತು.
116 ರನ್‍ಗಳ ಗುರಿ ಬೆನ್ನಟ್ಟಿರುವ ನೇಪಾಳ ಕೊನೆಯ ಹಂತದಲ್ಲಿ ಎಡವಿತು. ಆರಂಭಿಕ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಸೀಫ್ ಶೇಕ್ (42) ಮತ್ತು ಅನಿಲ್ ಶಾ (27) ಅವರ ಅಮೋಘ ಬ್ಯಾಟಿಂಗ್‍ನಿಂದ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ನೇಪಾಳ ತಂಡ ನಾಟಕೀಯ ಪತನ ಕಂಡು ಕೊನೆಯ ಎಸೆತದಲ್ಲಿ ಗುಲ್ಷನ್ ಝಾ ರನೌಟ್ ಆಗುವ ಮೂಲಕ ಒಂದು ರನ್ ಅಂತರದ ಸೋಲೊಪ್ಪಿಕೊಂಡಿತು. ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಈಗಾಗಲೇ ಸೂಪರ್ 8 ಹಂತ ತಲುಪಿದೆ.New Zealand won by 9 wkts