ಕೋಪಾ ಅಮೆರಿಕ ಟೂರ್ನಿಗೆ ನೇಮರ್ ಅಲಭ್ಯ: ಬ್ರೆಝಿಲ್ ತಂಡದ ವೈದ್ಯರ ಸ್ಪಷ್ಟನೆ
ಬ್ರೆಸಿಲ್ಲಾ: ಬ್ರೆಝಿಲ್ ನ ಫಾರ್ವರ್ಡ್ ಆಟಗಾರ ನೇಮರ್ ಮುಂದಿನ ವರ್ಷದ ಕೋಪಾ ಅಮೆರಿಕ ಟೂರ್ನಿಯ ವೇಳೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದಿಲ್ಲ ಎಂದು ರಾಷ್ಟ್ರೀಯ ತಂಡದ ವೈದ್ಯ ರೋಡ್ರಿಗೊ ಲಾಸ್ಮರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಬ್ರೆಝಿಲ್ ನ ಟಾಪ್ ಸ್ಕೋರರ್ ಅಕ್ಟೋಬರ್ನಲ್ಲಿ ಅಂತರ್ರಾಷ್ಟ್ರೀಯ ಪಂದ್ಯ ಆಡುತ್ತಿದ್ದಾಗ ಎಡ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಆಗಸ್ಟ್ ತನಕ 31ರ ವಯಸ್ಸಿನ ನೇಮರ್ ಫಿಟ್ ಆಗುವ ನಿರೀಕ್ಷೆ ಇಲ್ಲ. ಅಮೆರಿಕದಲ್ಲಿ ಜೂನ್ 20ರಿಂದ ಜುಲೈ 14ರ ತನಕ ನಡೆಯುವ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡಲು ನೇಮರ್ ಚೇತರಿಕೆಯ ಪ್ರಕ್ರಿಯೆಯಲ್ಲಿ ಅಡ್ಡದಾರಿ ಹಿಡಿಯುವ ಉದ್ದೇಶವಿಲ್ಲ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದ ಡಾ. ಲಾಸ್ಮಾರ್ ಹೇಳಿದ್ದಾರೆ.
ನೇಮರ್ ಆಗಸ್ಟ್ ನಲ್ಲಿ ಸೌದಿ ಪ್ರೊ ಲೀಗ್ ತಂಡ ಅಲ್-ಹಿಲಾಲ್ ಗೆ ಸೇರಿದ್ದರು. ಆದರೆ ಗಾಯದ ಸಮಸ್ಯೆಯ ಕಾರಣಕ್ಕೆ ಮಾಜಿ ಬಾರ್ಸಿಲೋನ ಹಾಗೂ ಪ್ಯಾರಿಸ್ ಸೇಂಟ್ ಜರ್ಮೈನ್ ಫಾರ್ವರ್ಡ್ ಆಟಗಾರ ಕೇವಲ 5 ಪಂದ್ಯಗಳನ್ನು ಆಡಿದ್ದರು.
ಬ್ರೆಝಿಲ್ ತಂಡ ಕೋಪಾ ಅಮೆರಿಕ ಟೂರ್ನಿಯಲ್ಲಿ ಕೊಲಂಬಿಯಾ, ಪರಾಗ್ವೆ ಹಾಗೂ ಕ್ವಾಲಿಫೈಯರ್ ತಂಡದೊಂದಿಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.