ವಾರ್ನರ್‌ಗೆ ಜೀವದಾನ ನೀಡಿ ಕೈಸುಟ್ಟುಕೊಂಡ ಪಾಕಿಸ್ತಾನ

Update: 2023-10-20 18:26 GMT

Photo: twitter/CricCrazyJohns

ಬೆಂಗಳೂರು: ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಉಸಾಮಾ ಮಿರ್ ಅವರು ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ನೀಡಿದ ಸ್ಟ್ರೈಟ್‌ಫಾರ್ವರ್ಡ್ ಕ್ಯಾಚ್ ಕೈಚೆಲ್ಲಿದರು. ಜೀವದಾನದ ಲಾಭ ಪಡೆದ ವಾರ್ನರ್ 163 ರನ್ ಸಿಡಿಸಿ ಅಬ್ಬರಿಸಿದರು.

ಆಸ್ಟ್ರೇಲಿಯ ಇನಿಂಗ್ಸ್‌ನ 5ನೇ ಓವರ್‌ನಲ್ಲಿ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ವಾರ್ನರ್ ನೀಡಿದ ಕ್ಯಾಚನ್ನು ಮಿರ್ ಕೈಚೆಲ್ಲಿದರು. ಆಗ ವಾರ್ನರ್ ಕೇವಲ 10 ರನ್ ಗಳಿಸಿದ್ದರು. ಪಾಕಿಸ್ತಾನವು ಇದಕ್ಕೆ ಭಾರೀ ಬೆಲೆ ತೆರಬೇಕಾಯಿತು. ವಾರ್ನರ್ 21ನೇ ಏಕದಿನ ಶತಕ ಗಳಿಸಿದರು. ವಿಶ್ವಕಪ್ ಟೂರ್ನಿಯಲ್ಲಿ 5ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ವಾರ್ನರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯವು 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು.

ವಾರ್ನರ್ ಕ್ಯಾಚ್ ಕೈಬಿಡುವ ಮೂಲಕ ಪಾಕಿಸ್ತಾನ ತಂಡವು ಆಸ್ಟ್ರೇಲಿಯ ವಿರುದ್ಧ ನಿರ್ಣಾಯಕ ಪಂದ್ಯಗಳಲ್ಲಿ ಕಳಪೆ ಫೀಲ್ಡಿಂಗ್ ಮಾಡುವ ಚಾಳಿಯನ್ನು ಮುಂದುವರಿಸಿದೆ. ಅಡಿಲೇಡ್‌ನಲ್ಲಿ 2019ರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯ 83 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ವೇಗದ ಬೌಲರ್ ವಹಾಬ್ ರಿಯಾಝ್ ಬೌಲಿಂಗ್‌ನಲ್ಲಿ ಶೇನ್ ವಾಟ್ಸನ್ ನೀಡಿದ್ದ ಸುಲಭ ಕ್ಯಾಚ್ ಅನ್ನು ರಹತ್ ಅಲಿ ಕೈಚೆಲ್ಲಿದ್ದರು. ವಾಟ್ಸನ್ ಔಟಾಗದೆ 64 ರನ್ ಗಳಿಸಿ ಆಸ್ಟ್ರೇಲಿಯಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಆಸ್ಟ್ರೇಲಿಯವು 5ನೇ ಬಾರಿ ವಿಶ್ವಕಪ್ ಗೆಲ್ಲಲು ಹಾದಿ ಸುಗಮಗೊಳಿಸಿದ್ದರು.

4 ವರ್ಷಗಳ ನಂತರ ಟೌಂಟನ್‌ನಲ್ಲಿ ಆಸಿಫ್ ಅಲಿ, ಆ್ಯರೊನ್ ಫಿಂಚ್ ನೀಡಿದ್ದ ಕ್ಯಾಚ್ ಕೈಚೆಲ್ಲಿದ್ದರು. 37 ರನ್‌ಗೆ ಜೀವದಾನ ಪಡೆದಿದ್ದ ಫಿಂಚ್ 82 ರನ್ ಗಳಿಸಿ ಆಸ್ಟ್ರೇಲಿಯಕ್ಕೆ 41 ರನ್ ಗೆಲುವು ತಂದುಕೊಟ್ಟಿದ್ದರು.

2021ರಲ್ಲಿ ದುಬೈನಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಗೆಲ್ಲಲು ಅಂತಿಮ 2 ಓವರ್‌ಗಳಲ್ಲಿ 22 ರನ್ ಅಗತ್ಯವಿದ್ದಾಗ ಪಾಕಿಸ್ತಾನದ ಹಸನ್ ಅಲಿ ಅವರು ಮಿಡ್ ವಿಕೆಟ್‌ನಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ಕೈಚೆಲ್ಲಿದ್ದರು. ಆಸ್ಟ್ರೇಲಿಯವು 5 ವಿಕೆಟ್‌ನಿಂದ ಗೆಲುವು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News