ಭಾರತಕ್ಕೆ ಪ್ರಯಾಣಿಸಲು ಪಾಕ್ ಹಾಕಿ ತಂಡಕ್ಕೆ ಸರಕಾರದ ಅನುಮತಿ
ಕರಾಚಿ : ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನ ಹಾಕಿ ತಂಡಕ್ಕೆ ಅಲ್ಲಿನ ಸರಕಾರ ಅನುಮತಿ ನೀಡಿದೆ.
ಪಂದ್ಯಾವಳಿಯು ಆಗಸ್ಟ್ 3ರಿಂದ ಚೆನ್ನೈಯಲ್ಲಿ ನಡೆಯಲಿದೆ.
ಕ್ರೀಡಾ ಮಂಡಳಿಯು ಆಂತರಿಕ ಸಚಿವಾಲಯದಿಂದ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಕಾರ್ಯದರ್ಶಿ ಹೈದರ್ ಹುಸೈನ್ ಶುಕ್ರವಾರ ತಿಳಿಸಿದ್ದಾರೆ. ‘‘ಹಾಕಿ ತಂಡವು ಮಂಗಳವಾರ ವಾಘಾ ಗಡಿಯ ಮೂಲಕ ಅಮೃತಸರಕ್ಕೆ ತೆರಳಲಿದೆ. ಅಲ್ಲಿಂದ ವಿಮಾನದ ಮೂಲಕ ಚೆನ್ನೈ ತಲುಪಲಿದೆ’’ ಎಂದು ಅವರು ಹೇಳಿದರು.
ಹೊಸದಾಗಿ ನೇಮಿಸಲ್ಪಟ್ಟಿರುವ ರಾಷ್ಟ್ರೀಯ ಹಾಕಿ ತಂಡದ ಸಲಹೆಗಾರ ಶಹನಾಝ್ ಶೇಕ್ ಸೇರಿದಂತೆ ಮೂವರು ಅಧಿಕಾರಿಗಳಿಗೆ ವೀಸಾಕ್ಕಾಗಿ ನಾವು ಈಗಲೂ ಕಾಯುತ್ತಿದ್ದೇವೆ ಎಂದು ಹೈದರ್ ಹೇಳಿದರು.
ಪಾಕಿಸ್ತಾನ ಹಾಕಿ ಫೆಡರೇಶನ್ ಈ ತಿಂಗಳ ಆದಿ ಭಾಗದಲ್ಲಿ ಶಹನಾಝ್ರನ್ನು ಹಾಕಿ ತಂಡದ ಹಿರಿಯ ಸಲಹೆಗಾರನಾಗಿ ನೇಮಿಸಿತ್ತು. 2014ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ವೇಳೆ ಅವರು ಪಾಕಿಸ್ತಾನ ತಂಡದ ಪ್ರಧಾನ ಕೋಚ್ ಆಗಿದ್ದರು. ಪಂದ್ಯಾವಳಿಯ ಫೈನಲ್ನಲ್ಲಿ ಪಾಕಿಸ್ತಾನ ಸೋತಿತ್ತು.
ಸೋಮವಾರ ವೀಸಾಗಳು ಸಿಗುವ ನಿರೀಕ್ಷೆಯಿದೆ ಎಂದು ಹೈದರ್ ಹೇಳಿದರು. ಆಟಗಾರರು ಮತ್ತು ಇತರ ಅಧಿಕಾರಿಗಳಿಗೆ ಭಾರತೀಯ ಹೈಕಮಿಶನ್ ಈಗಾಗಲೇ ವೀಸಾಗಳನ್ನು ನೀಡಿದೆ.
ಪಾಕಿಸ್ತಾನವು ತನ್ನ ಮೊದಲ ಪಂದ್ಯವನ್ನು ಆಗಸ್ಟ್ 3ರಂದು ಮಲೇಶ್ಯದ ವಿರುದ್ಧ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಆಗಸ್ಟ್ 9ರಂದು ನಡೆಯುತ್ತದೆ.