ದಕ್ಷಿಣ ಆಫ್ರಿಕಾಗೆ 271 ರನ್ ಗುರಿ ನೀಡಿದ ಪಾಕಿಸ್ತಾನ
ಚೆನೈ: ಇಲ್ಲಿನ ಎಂ.ಎ ಚಿದಂಬರಂ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಗೆಲುವಿಗೆ 271 ರನ್ ಗುರಿ ನೀಡಿದೆ.
ನಾಯಕ ಬಾಬರ್ ಅಝಮ್ ಹಾಗೂ ಸೌದ್ ಶಕೀಲ್ ಅರ್ಧಶತಕ ಗಳಿಸಿದರು. ದಕ್ಷಿಣ ಆಫ್ರಿಕಾದ ಪರಿಣಾಮಕಾರಿ ಬೌಲಿಂಗ್ ನಿಂದ ಪಾಕಿಸ್ತಾನ 46.4 ಓವರ್ ಗಳಲ್ಲಿ 270 ರನ್ ರನ್ ಗೆ ಆಲೌಟ್ ಆಯಿತು. ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕ್ ತಂಡ ಈ ಪಂದ್ಯದಲ್ಲಿಯೂ ತನ್ನ ಆರಂಭಿಕ ಎರಡು ವಿಕೆಟ್ ಗಳನ್ನು 6.3 ಓವರ್ ಒಳಗಡೆಯೇ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿತು.
ಅಬ್ದುಲ್ಲಾ ಶಫೀಕ್ 9 ರನ್ ಗಳಿಸಿದರೆ ಇಮಾಮುಲ್ ಹಕ್ 12 ರನ್ ಬಾರಿಸಿ ಕ್ರಮವಾಗಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಔಟ್ ಆದರು. ವಿಕೆಟ್ ಕೀಪರ್ ರಿಝ್ವಾನ್ 31 ರನ್ ಗಳಿಸಿ ಧನಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದರೂ ಜೆರಾಲ್ಡ್ ಬೌಲಿಂಗ್ ನಲ್ಲಿ ಡಿ ಕಾಕ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ಅಹ್ಮದ್ 21 ರನ್ ಗಳಿಸಿ ಶಂಝಿ ಸ್ಪಿನ್ ಮೋಡಿಗೆ ವಿಕೆಟ್ ಕಳೆದುಕೊಂಡರು. ತಂಡದ ಪರ ಆರಂಭದಲ್ಲಿ ಏಕಾಂಗಿ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಬಾಬರ್ ಅಝಮ್ 4 ಬೌಂಡರಿ 1 ಸಿಕ್ಸರ್ ಸಹಿತ 50 ಬಾರಿಸಿ ಯಾರೊಬ್ಬರೂ ಸಾಥ್ ನೀಡದ ಪರಿಣಾಮ ಒತ್ತಡ ಕ್ಕೆ ಸಿಲುಕಿ ತಬ್ರೈಝ್ ಶಂಸಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಬಳಿಕ ತಂಡಕ್ಕೆ ಕೊಂಚ ಚೇತರಿಕೆ ನೀಡಿದ ಸೌದ್ ಶಕೀಲ್ ಹಾಗೂ ಶಾದಬ್ ಖಾನ್ ಜೋಡಿ 84 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಈ ಜೊತೆಯಾಟದಲ್ಲಿ ಶಾದಬ್ ಖಾನ್ 43 ರನ್ ಗಳಿಸಿ ಔಟ್ ಆದರೆ, ಸೌದ್ ಶಕೀಲ್ 7 ಬೌಂಡರಿ ಸಹಿತ 52 ರನ್ ಬಾರಿಸಿ ತಬ್ರೈಝ್ ಶಂಸಿ ಸ್ಪಿನ್ ಬಲೆ ಗೆ ಬಿದ್ದರು. ಮುಹಮ್ಮದ್ ನವಾಝ್ 24, ಶಾಹೀನ್ ಅಫ್ರಿದಿ 2 , ಮುಹಮ್ಮದ್ ವಾಸಿಮ್ 7 ರನ್ ಬಾರಿಸಿದ್ದರು.
ದಕ್ಷಿಣ ಆಫ್ರಿಕಾ ಪರ ತಬ್ರೈಝ್ ಶಂಸಿ 4 ಪಡೆದುಕೊಂಡರೆ ವಿಕೆಟ್ ಮಾರ್ಕೊ ಜಾನ್ಸನ್ 3, ಜೆರಾಲ್ಡ್ ಕೊಯಿಟ್ಝಿ 2, ಲಿಂಗಿ ಎನ್ ಗಿಡಿ 1 ವಿಕೆಟ್ ಕಬಳಿಸಿದರು.