ವಿಶ್ವಕಪ್ ವೇಳೆ ಪ್ರಮುಖ ಮೈಲಿಗಲ್ಲುಗಳ ನಿರೀಕ್ಷೆಯಲ್ಲಿರುವ ಆಟಗಾರರು
ಹೊಸದಿಲ್ಲಿ : ಕಳೆದ ಹಲವು ದಶಕಗಳಲ್ಲಿ ವಿಶ್ವಕಪ್ ಟೂರ್ನಿಯು ಕೆಲವು ಅತ್ಯುತ್ತಮ ಏಕದಿನ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಅನೇಕ ದಾಖಲೆಗಳನ್ನುಮುರಿಯಲಾಗಿದೆ ಹಾಗೂ ಹೊಸ ದಾಖಲೆ ನಿರ್ಮಿಸಲಾಗಿದೆ. 2023 ರ ಆವೃತ್ತಿಯ ಟೂರ್ನಿ ಕೂಡ ದಾಖಲೆ ನಿರ್ಮಿಸುವತ್ತ ಹೆಚ್ಚಿನ ಭರವಸೆ ಮೂಡಿಸಿದೆ.
ಕೆಲವು ಪ್ರಮುಖ ವೈಯಕ್ತಿಕ ಮೈಲಿಗಲ್ಲುಗಳು ನಿರೀಕ್ಷೆಯಲ್ಲಿರುವ ಆಟಗಾರರತ್ತ ಒಂದು ನೋಟ..
ಟ್ರೆಂಟ್ ಬೌಲ್ಟ್: 104 ಪಂದ್ಯಗಳಲ್ಲಿ 197 ವಿಕೆಟ್ ಪಡೆದಿರುವ ಬೌಲ್ಟ್ ಗೆ 200 ವಿಕೆಟ್ಗಳನ್ನು ಪೂರ್ಣಗೊಳಿಸಲು ಕೇವಲ ಮೂರು ವಿಕೆಟ್ಗಳ ಅಗತ್ಯವಿದೆ.
ಮಿಚೆಲ್ ಸ್ಟಾರ್ಕ್: ವಿಶ್ವಕಪ್ನಲ್ಲಿ 50 ಪ್ಲಸ್ ವಿಕೆಟ್ಗಳನ್ನು ಪೂರೈಸಿದ ಎರಡನೇ ಆಸ್ಟ್ರೇಲಿಯದ ಬೌಲರ್ ಆಗಲು ಮಿಚೆಲ್ ಸ್ಟಾರ್ಕ್ಗೆ (18 ಪಂದ್ಯಗಳಲ್ಲಿ 49 ವಿಕೆಟ್) ಕೇವಲ ಒಂದು ವಿಕೆಟ್ ಅಗತ್ಯವಿದೆ. ಗ್ಲೆನ್ ಮೆಕ್ಗ್ರಾತ್ 39 ಪಂದ್ಯಗಳಲ್ಲಿ 71 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದು ವಿಶ್ವಕಪ್ ದಾಖಲೆಯಾಗಿದೆ.
ಡೇವಿಡ್ ವಾರ್ನರ್ (18 ಪಂದ್ಯಗಳಲ್ಲಿ 992 ರನ್) ವಾರ್ನರ್ ಗೆ ವಿಶ್ವಕಪ್ನಲ್ಲಿ 1,000 ರನ್ ಪೂರೈಸಲು ಕೇವಲ ಎಂಟು ರನ್ಗಳ ಅಗತ್ಯವಿದೆ. ಆಸ್ಟ್ರೇಲಿಯದ ಮೂವರು ಆಟಗಾರರು ಈಗಾಗಲೇ ಈ ಸಾಧನೆ ಮಾಡಿದ್ದಾರೆ. ಅವರುಗಳೆಂದರೆ: ರಿಕಿ ಪಾಂಟಿಂಗ್ (1,743), ಆ್ಯಡಮ್ ಗಿಲ್ಕ್ರಿಸ್ಟ್ (1,085) ಹಾಗೂ ಮಾರ್ಕ್ ವಾ (1004).
ರಿಕಿ ಪಾಂಟಿಂಗ್ (46 ಪಂದ್ಯಗಳಲ್ಲಿ ಐದು) ಹೊಂದಿರುವ ವಿಶ್ವ ಕಪ್ನ ಅತಿ ಹೆಚ್ಚು ಶತಕಗಳ ಆಸ್ಟ್ರೇಲಿಯದ ದಾಖಲೆಯನ್ನು ಮುರಿಯಲು ವಾರ್ನರ್ (ನಾಲ್ಕು ಶತಕ) ಕೇವಲ ಒಂದು ಶತಕದ ಅಗತ್ಯವಿದೆ.
ರೋಹಿತ್ ಶರ್ಮಾ (243 ಇನ್ನಿಂಗ್ಸ್ಗಳಲ್ಲಿ 292 ಸಿಕ್ಸರ್ಗಳು) ಶಾಹಿದ್ ಆಫ್ರಿದಿ (369 ರಲ್ಲಿ 351) ಮತ್ತು ಕ್ರಿಸ್ ಗೇಲ್ (294 ರಲ್ಲಿ 331) ನಂತರ ಏಕದಿನದಲ್ಲಿ ಸಿಕ್ಸರ್ಗಳ ತ್ರಿಶತಕವನ್ನು ಪೂರ್ಣಗೊಳಿಸಿದ ಮೂರನೇ ಬ್ಯಾಟರ್ ಆಗಲು ರೋಹಿತ್ ಗೆ ಕೇವಲ ಎಂಟು ಸಿಕ್ಸರ್ಗಳು ಬೇಕಾಗಿವೆ.
ವಿರಾಟ್ ಕೊಹ್ಲಿ (269 ಇನ್ನಿಂಗ್ಸ್ಗಳಲ್ಲಿ 47 ಶತಕ): ಮುಂಬರುವ ವಿಶ್ವಕಪ್ ನಲ್ಲಿ ಏಕದಿನದಲ್ಲಿ 50 ಶತಕಗಳನ್ನು ಪೂರೈಸಿದ ಮೊದಲ ಬ್ಯಾಟರ್ ಎಂಬ ಇತಿಹಾಸವನ್ನು ಸೃಷ್ಟಿಸಲು ಕೊಹ್ಲಿ ಸಿದ್ಧರಾಗಿದ್ದಾರೆ. ಕೊಹ್ಲಿ ಕೇವಲ ಎರಡು ಶತಕಗಳನ್ನು ಗಳಿಸಿದರೆ, ಅವರು 452 ಇನ್ನಿಂಗ್ಸ್ಗಳಲ್ಲಿ 49 ಶತಕಗಳನ್ನು ಗಳಿಸಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆ ಸರಿಗಟ್ಟುತ್ತಾರೆ.
ರೋಹಿತ್ ಶರ್ಮಾ (17 ಇನಿಂಗ್ಸ್ಗಳಲ್ಲಿ 978 ರನ್) : ವಿಶ್ವಕಪ್ನಲ್ಲಿ 1000 ಅಥವಾ ಅದಕ್ಕಿಂತ ಹೆಚ್ಚಿನ ರನ್ ಪೂರೈಸಿದ ನಾಲ್ಕನೇ ಭಾರತೀಯ ಬ್ಯಾಟರ್ ಆಗಲು ರೋಹಿತ್ ಗೆ 22 ರನ್ಗಳ ಅಗತ್ಯವಿದೆ. ಮೊದಲ ಮೂರು ಸ್ಥಾನಗಳಲ್ಲಿ ಸಚಿನ್ ತೆಂಡುಲ್ಕರ್ (2,278), ವಿರಾಟ್ ಕೊಹ್ಲಿ (1,030) ಮತ್ತು ಸೌರವ್ ಗಂಗುಲಿ (1,006) ಅವರಿದ್ದಾರೆ.
ವಿಶ್ವಕಪ್ನಲ್ಲಿ ಭಾರತದ ಪ್ರಮುಖ ಫೀಲ್ಡರ್ ಆಗಲು ವಿರಾಟ್ ಕೊಹ್ಲಿಗೆ (26 ಇನಿಂಗ್ಸ್ಗಳಲ್ಲಿ 14) ಕೇವಲ ಒಂದು ಕ್ಯಾಚ್ ಅಗತ್ಯವಿದೆ. ಅನಿಲ್ ಕುಂಬ್ಳೆ 18 ಇನಿಂಗ್ಸ್ಗಳಲ್ಲಿ 14 ಕ್ಯಾಚ್ ಗಳನ್ನು ಪಡೆದಿದ್ದರು.
ಜೋ ರೂಟ್ (16 ಇನಿಂಗ್ಸ್ಗಳಲ್ಲಿ ಮೂರು ಶತಕ ಮತ್ತು ಮೂರು ಅರ್ಧಶತಕಗಳ ಸಹಿತ 758 ರನ್) ವಿಶ್ವಕಪ್ ನಲ್ಲಿ ಇಂಗ್ಲೆಂಡ್ನ ಪರ ಗರಿಷ್ಠ ರನ್ ಗಳಿಸಿದ ಆಟಗಾರನಾಗಲು ರೂಟ್ ಸಿದ್ಧರಾಗಿದ್ದಾರೆ. ಕೇವಲ ಒಬ್ಬ ಬ್ಯಾಟರ್ ಮಾತ್ರ ಇಂಗ್ಲೆಂಡ್ ಪರ ಹೆಚ್ಚು ರನ್ ಗಳಿಸಿದ್ದಾರೆ. ಗ್ರಹಾಂ ಗೂಚ್ ಅವರು 21 ಇನಿಂಗ್ಸ್ಗಳಲ್ಲಿ ಶತಕ, ಎಂಟು ಅರ್ಧಶತಕಗಳ ಸಹಿತ ಒಟ್ಟು 897 ರನ್ ಗಳಿಸಿದ್ದಾರೆ.
ಜೋಸ್ ಬಟ್ಲರ್ ( 142 ಇನಿಂಗ್ಸ್, 11 ಶತಕ,25ಅರ್ಧಶತಕಗಳ ಸಹಿತ 4823 ರನ್) ) ಏಕದಿನ ಕ್ರಿಕೆಟ್ ನಲ್ಲಿ 5,000 ರನ್ಗಳನ್ನು ಪೂರ್ಣಗೊಳಿಸಲು ಬಟ್ಲರ್ ಗೆ 177 ರನ್ಗಳ ಅಗತ್ಯವಿದೆ.