ಒಲಿಂಪಿಕ್ಸ್ ತಂಡದೊಂದಿಗೆ ಪ್ರಧಾನಿ ಮೋದಿ ಸಂವಾದ | ಎಲ್ಲ ಆಟಗಾರರ ಸಹಿ ಇರುವ ಸ್ಟಿಕ್ ನೀಡಿದ ಹಾಕಿ ತಂಡ

Update: 2024-08-15 16:14 GMT

PC : PTI 

ಹೊಸದಿಲ್ಲಿ : ಆರು ಪದಕಗಳೊಂದಿಗೆ ಇತ್ತೀಚೆಗೆ ಪ್ಯಾರಿಸ್‌ನಿಂದ ವಾಪಸಾಗಿರುವ ಭಾರತೀಯ ತಂಡದ ಸದಸ್ಯರುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ತನ್ನ ನಿವಾಸದಲ್ಲಿ ಭೇಟಿಯಾದರು.

ಪ್ಯಾರಿಸ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿರುವ ಶೂಟರ್ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಜಯಿಸಲು ಬಳಸಿದ್ದ ಪಿಸ್ತೂಲ್ ಅನ್ನು ಪ್ರಧಾನಿಗೆ ತೋರಿಸಿದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಎರಡನೇ ಕಂಚಿನ ಪದಕ ಜಯಿಸಿದ್ದ ಭಾರತೀಯ ಪುರುಷರ ಹಾಕಿ ತಂಡವು ಎಲ್ಲ ಆಟಗಾರರ ಸಹಿ ಇರುವ ಹಾಕಿ ಸ್ಟಿಕ್ ಅನ್ನು ಪ್ರಧಾನಮಂತ್ರಿಗೆ ಪ್ರದಾನಿಸಿತು.

ನಿವೃತ್ತ ಆಟಗಾರ ಪಿ.ಆರ್.ಶ್ರೀಜೇಶ್ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನೊಳಗೊಂಡ ಹಾಕಿ ತಂಡವು ಕಂಚಿನ ಪದಕವನ್ನು ಧರಿಸಿ ಪ್ರಧಾನಿ ಮೋದಿಯೊಂದಿಗೆ ಪೋಸ್ ನೀಡಿದರು.

ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಜಯಿಸಿರುವ ಮೊದಲ ಭಾರತೀಯಳಾಗಿರುವ ಭಾಕರ್ ಅವರು ಪ್ಯಾರಿಸ್‌ ನಲ್ಲಿ 10 ಮೀ. ಏರ್ ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಲು ಬಳಸಿದ್ದ ಪಿಸ್ತೂಲ್ ಕುರಿತು ಪ್ರಧಾನಿಗೆ ವಿವರಣೆ ನೀಡಿದರು.

ಭಾಕರ್‌ ರೊಂದಿಗೆ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ಸರಬ್ಜೋತ್ ಸಿಂಗ್, 50 ಮೀ. ರೈಫಲ್ 3 ಪೊಸಿಶನ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸ್ವಪ್ನಿಲ್ ಕುಸಾಲೆ ಅವರು ಪ್ರಧಾನಮಂತ್ರಿಯೊಂದಿಗೆ ಸಂವಾದ ನಡೆಸಿದರು.

ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿರುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಪ್ರಧಾನಿ ಮೋದಿ ಸಹಿ ಮಾಡಿದ ಭಾರತದ ಜರ್ಸಿಯನ್ನು ಹಿಡಿದುಕೊಂಡು ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಭಾರತಕ್ಕೆ ಇನ್ನಷ್ಟೇ ಮರಳಬೇಕಾಗಿದೆ. ತನ್ನನ್ನು ಕಾಡುತ್ತಿರುವ ತೊಡೆ ಸಂಧು ಗಾಯದ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಲು ಹಾಗೂ ಯುರೋಪ್‌ನಲ್ಲಿನ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಜರ್ಮನಿಗೆ ಹೋಗಿರುವ ಕಾರಣ ಚೋಪ್ರಾ ಅವರು ಇನ್ನೂ ಭಾರತಕ್ಕೆ ವಾಪಸಾಗಿಲ್ಲ.

ಶಟ್ಲರ್ ಲಕ್ಷ್ಯ ಸೇನ್ ಸಹಿತ ಒಲಿಂಪಿಕ್ಸ್ ತಂಡದ ಹಲವು ಸದಸ್ಯರುಗಳ ಜೊತೆಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು.

ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ಲವ್ಲೀನಾ ಬೊರ್ಗೊಹೈನ್(ಬಾಕ್ಸಿಂಗ್)ಹಾಗೂ ಸೈಖೋಮ್ ಮೀರಾಬಾಯಿ ಚಾನು(ವೇಟ್‌ಲಿಫ್ಟಿಂಗ್)ಪ್ರಧಾನಿಯನ್ನು ಭೇಟಿಯಾದ ಕ್ರೀಡಾಪಟುಗಳಲ್ಲಿ ಸೇರಿದ್ದಾರೆ.

ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷೆ ಪಿ.ಟಿ. ಉಷಾ ಕೂಡ ಈ ವೇಳೆ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಭಾರತದ ಒಲಿಂಪಿಕ್ಸ್ ತಂಡವು ಐತಿಹಾಸಿಕ ಕೆಂಪುಕೋಟೆಯಲ್ಲಿ ಹಾಜರಾಗಿತ್ತು. ಪ್ರಧಾನಿ ಮೋದಿ ಅವರು 78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News