ಮುಂದಿನ ಐಪಿಎಲ್‌ಗೆ ರಿಷಭ್ ಪಂತ್ ವಾಪಸ್: ದೃಢಪಡಿಸಿದ ಸೌರವ್ ಗಂಗುಲಿ
ಹೊಸದಿಲ್ಲಿ: ಮುಂದಿನ ಐಪಿಎಲ್ ಋತುವಿಗೆ ಭಾರತದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ವಾಪಸಾಗಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ಡೈರೆಕ್ಟರ್ ಸೌರವ್ ಗಂಗುಲಿ ದೃಢಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಪಂತ್ ಕಳೆದ ವರ್ಷ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಪಂತ್ ಚಲಾಯಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಪಂತ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಪಂತ್ ಹಲವು ರೀತಿಯ ಗಾಯದಿಂದ ಚೇತರಿಸಿಕೊಂಡಿದ್ದು, ಗುರುವಾರ ಜಾದವ್‌ಪುರ ಯುನಿವರ್ಸಿಟಿ ಸಾಲ್ಟ್‌ಲೇಕ್ ಕ್ಯಾಂಪಸ್ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ನ ತರಬೇತಿಯಲ್ಲಿ ಸಹ ಆಟಗಾರರನ್ನು ಸೇರಿಕೊಂಡರು.
ಕ್ರಿಕೆಟ್ ಮೈದಾನಕ್ಕೆ ಪಂತ್ ಅವರ ಪುನರಾಗಮನದ ಸುದ್ದಿಯನ್ನು ಅಭಿಮಾನಿಗಳು ಹಾಗೂ ಕ್ರಿಕೆಟ್ ಉತ್ಸಾಹಿಗಳು ಸ್ವಾಗತಿಸುವ ನಿರೀಕ್ಷೆ ಇದೆ.
ಅವರೀಗ(ಪಂತ್)ಚೆನ್ನಾಗಿದ್ದಾರೆ. ಮುಂದಿನ ಐಪಿಎಲ್ ಋತುವಿನಲ್ಲಿ ಆಡಲಿದ್ದಾರೆ ಎಂದು ಪಂತ್ ಆರೋಗ್ಯದ ಕುರಿತು ಮಾಹಿತಿ ನೀಡಿದ ಗಂಗುಲಿ ಕೋಲ್ಕತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಡಿ.19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗಿಂತ ಮೊದಲು ತಂಡವನ್ನು ಕಟ್ಟುವ ಕುರಿತು ರಣನೀತಿ ರೂಪಿಸಲು ಪಂತ್ ಕೋಲ್ಕತಾದಲ್ಲಿ ಮೂರು ದಿನಗಳ ಭೇಟಿಯಲ್ಲಿದ್ದಾರೆ.
ಕಳೆದ ಋತುವಿನಲ್ಲಿ ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಡೆಲ್ಲಿ 8ನೇ ಸ್ಥಾನ ಪಡೆದಿತ್ತು.
ರಿಷಭ್ ಕೋಲ್ಕತಾದಲ್ಲಿ ಅಭ್ಯಾಸ ನಡೆಸಲಿಲ್ಲ. ಪ್ರಾಕ್ಟೀಸ್ ಆರಂಭಿಸಲು ಪಂತ್‌ಗೆ ಇನ್ನು ಸಾಕಷ್ಟು ಸಮಯವಿದೆ. 2024ರ ಜನವರಿಯಲ್ಲಿ ಅವರು ಚೆನ್ನಾಗಿ ಚೇತರಿಸಿಕೊಳ್ಳಲಿದ್ದಾರೆ. ನಾವು ತಂಡದ ಕುರಿತು ಮಾತನಾಡಿದ್ದೇವೆ. ಪಂತ್ ತಂಡದ ನಾಯಕನಾಗಿರುವ ಕಾರಣ ಮುಂಬರುವ ಆಟಗಾರರ ಹರಾಜಿನ ಕುರಿತು ತನ್ನ ಅಭಿಪ್ರಾಯ ನೀಡಿದ್ದಾರೆ. ಈ ಕಾರಣಕ್ಕೆ ಅವರು ಇಲ್ಲಿಗೆ ಬಂದಿದ್ದಾರೆ. ತಂಡಕ್ಕೆ ಸಂಬಂಧಿಸಿದ ಕೆಲವು ಅಂಶವನ್ನು ಅಂತಿಮಗೊಳಿಸಿದ್ದಾರೆ ಎಂದು ಗಂಗುಲಿ ನುಡಿದರು.
ಪಂತ್ 2022 ಡಿಸೆಂಬರ್‌ನಲ್ಲಿ ಮೀರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಪರ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು