ರೋಹಿತ್, ಕೊಹ್ಲಿ ವೇಗವಾಗಿ 5,000 ರನ್ ಜೊತೆಯಾಟ
ಕೊಲಂಬೊ: ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್ ಜೊತೆಯಾಟ ನಡೆಸಿದ ಆರನೇ ಜೋಡಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ, ರೋಹಿತ್ ಹಾಗೂ ಶಿಖರ್ ಧವನ್ ನಂತರ ಈ ಮೈಲಿಗಲ್ಲು ತಲುಪಿದ ಭಾರತದ 3ನೇ ಜೋಡಿಯಾಗಿದ್ದಾರೆ.
ರೋಹಿತ್ ಹಾಗೂ ಕೊಹ್ಲಿ ಅತ್ಯಂತ ವೇಗವಾಗಿ ಈ ಹೆಗ್ಗುರುತು ತಲುಪಿದ ಜೋಡಿ ಎನಿಸಿದ್ದಾರೆ. ಈ ಮೂಲಕ ವೆಸ್ಟ್‌ಇಂಡೀಸ್‌ನ ಲೆಜೆಂಡರಿ ಜೋಡಿ ಗೋರ್ಡನ್ ಗ್ರೀನಿಜ್ ಹಾಗೂ ಡೆಸ್ಮಂಡ್ ಹೇನ್ಸ್(97 ಇನಿಂಗ್ಸ್)ದಾಖಲೆಯನ್ನು ಮುರಿದರು.
ಕೊಹ್ಲಿ ಹಾಗೂ ರೋಹಿತ್ ತಮ್ಮ 86ನೇ ಏಕದಿನ ಇನಿಂಗ್ಸ್‌ನಲ್ಲಿ 5,000 ರನ್ ಜೊತೆಯಾಟ ಪೂರೈಸಿದರು. ಈ ಜೋಡಿ 62.47ರ ಸರಾಸರಿಯಲ್ಲಿ 18 ಬಾರಿ ಶತಕದ ಜೊತೆಯಾಟ ಹಾಗೂ 15 ಬಾರಿ ಅರ್ಧಶತಕದ ಜೊತೆಯಾಟ ನಡೆಸಿದೆ.
ಬಲಗೈ ಬ್ಯಾಟರ್‌ಗಳಾದ ರೋಹಿತ್ ಹಾಗೂ ಕೊಹ್ಲಿ 2018ರಲ್ಲಿ ಗರಿಷ್ಠ ರನ್ ಜೊತೆಯಾಟ ನಡೆಸಿದ್ದರು. ಆಗ ಗುವಾಹಟಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಪಂದ್ಯದಲ್ಲಿ 323 ರನ್ ಚೇಸಿಂಗ್ ವೇಳೆ 246 ರನ್ ಜೊತೆಯಾಟ ನಡೆಸಿದ್ದರು.