ಕ್ರಿಕೆಟ್ ಇತಿಹಾಸದಲ್ಲಿ ಯಾವ ನಾಯಕನೂ ಮಾಡದ ಸಾಧನೆಗೈದ ರೋಹಿತ್ ಶರ್ಮಾ

Update: 2025-03-05 20:02 IST
Rohit Sharma

 ರೋಹಿತ್ ಶರ್ಮಾ | PC : PTI 

  • whatsapp icon

ಹೊಸದಿಲ್ಲಿ: ದುಬೈನಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್‌ ಗೆ ತಲುಪಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಇತಿಹಾಸದಲ್ಲಿ ಈ ತನಕ ಯಾವ ನಾಯಕನೂ ಮಾಡದ ಸಾಧನೆ ಮಾಡಿದ್ದಾರೆ.

ರೋಹಿತ್ ಇದೀಗ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಆಯೋಜಿಸಿರುವ ಎಲ್ಲ ಪಂದ್ಯಾವಳಿಗಳಲ್ಲಿ ತಂಡವನ್ನು ಫೈನಲ್‌ ಗೆ ತಲುಪಿಸಿರುವ ಏಕೈಕ ನಾಯಕನಾಗಿ ಹೊರಹೊಮ್ಮಿದ್ದಾರೆ. ನಾಯಕನಾಗಿ ಕೇವಲ ಮೂರು ವರ್ಷಗಳ ಅವಧಿಯಲ್ಲಿ ರೋಹಿತ್ ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ)ಟೂರ್ನಿಗಳಲ್ಲಿ ಟೀಮ್ ಇಂಡಿಯಾವು ಫೈನಲ್ ತಲುಪಲು ನೇತೃತ್ವವಹಿಸಿದ್ದಾರೆ.

ಭಾರತ ತಂಡವು ಮಂಗಳವಾರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ ಫೈನಲ್‌ ಗೆ ತಲುಪಿದೆ. ಉಳಿದ ಯಾವ ತಂಡ ಕೂಡ ಮೂರಕ್ಕಿಂತ ಹೆಚ್ಚು ಬಾರಿ ಫೈನಲ್ ತಲುಪಿಲ್ಲ.

2023ರಲ್ಲಿ ಭಾರತ ತಂಡವು ಡಬ್ಲ್ಯುಟಿಸಿ ಫೈನಲ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ ಗೆ ತಲುಪಿತ್ತು. ಆದರೆ, ಎರಡೂ ಬಾರಿಯೂ ಆಸ್ಟ್ರೇಲಿಯ ತಂಡದ ವಿರುದ್ಧ ಸೋತಿತ್ತು. ಮರು ವರ್ಷ, 2024ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟಿ-20 ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು. ಇದು ಭಾರತವು 10 ವರ್ಷಗಳ ನಂತರ ಮೊದಲ ಬಾರಿ ಜಯಿಸಿದ ಐಸಿಸಿ ಪ್ರಶಸ್ತಿಯಾಗಿದೆ. 2007ರ ನಂತರ ಎರಡನೇ ಬಾರಿ ಟಿ-20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.

ಒಂದು ವೇಳೆ ಭಾರತ ತಂಡವು ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟಕ್ಕೇರಿದರೆ ಎಂ.ಎಸ್. ಧೋನಿ ಅವರ ಸಾಧನೆ ಸರಿಗಟ್ಟಲಿದ್ದಾರೆ. ಭಾರತವು 2013ರಲ್ಲಿ ಧೋನಿ ನಾಯತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಈ ತನಕ ಆಡಿರುವ 4 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದಾರೆ. ಆದರೆ ಭಾರತ ತಂಡದ ನಾಯಕ ಇನ್ನಷ್ಟೇ ದೊಡ್ಡ ಸ್ಕೋರನ್ನು ಗಳಿಸಬೇಕಾಗಿದೆ.

ರೋಹಿತ್ ಟೂರ್ನಿಯಲ್ಲಿ ಈ ತನಕ ಕೇವಲ 104 ರನ್ ಗಳಿಸಿದ್ದು, 41 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಮಾ.9ರಂದು ನಡೆಯಲಿರುವ ಫೈನಲ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿ ತಂಡಕ್ಕೆ ಗೆಲುವು ತಂದುಕೊಡಲು ಬಯಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News