ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್: ಭಾರತದ ಪುರುಷರ ಹಾಕಿ ತಂಡಕ್ಕೆ ಮತ್ತೊಂದು ಸೋಲು

Update: 2024-04-07 16:31 GMT

PC: olympics.com 

ಪರ್ತ್: ಭಾರತದ ಪುರುಷರ ಹಾಕಿ ತಂಡ ಮೊದಲ ಪಂದ್ಯಕ್ಕಿಂತ ಸುಧಾರಿತ ಪ್ರದರ್ಶನ ನೀಡಿದರೂ ರವಿವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ 2-4 ಅಂತರದಿಂದ ಸೋಲುಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ 1-5 ಅಂತರದಿಂದ ಸೋತ ನಂತರ ಭಾರತೀಯರು ತನ್ನ ಬಲಿಷ್ಠ ಎದುರಾಳಿ ಎದುರು ಪಂದ್ಯದ ಮೊದಲ ಹಾಗೂ ಎರಡನೇ ಕ್ವಾರ್ಟರ್‌ನಲ್ಲಿ ಸಮರ್ಥವಾಗಿ ಆಡಿತು.

ಭಾರತ ಮೊದಲಾರ್ಧದ ಅಂತ್ಯಕ್ಕೆ 2-1 ಮುನ್ನಡೆಯಲ್ಲಿತ್ತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಕೆಲವು ಕಳಪೆ ಪ್ರದರ್ಶನದಿಂದಾಗಿ ಪಂದ್ಯವು ಕೈಜಾರಿತು. ಈ ಅವಧಿಯಲ್ಲಿ ಮೂರು ಗೋಲುಗಳನ್ನು ಗಳಿಸಿದ ಆತಿಥೇಯರು ಸತತ ಎರಡನೇ ಗೆಲುವು ದಾಖಲಿಸಿದರು.

ಆಸ್ಟ್ರೇಲಿಯದ ಪರ ಜೆರೆಮಿ ಹೇವಾರ್ಡ್(6ನೇ ಹಾಗೂ 34ನೇ ನಿಮಿಷ)ಎರಡು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಅವಳಿ ಗೋಲು ಗಳಿಸಿದರೆ, ಜೇಕಬ್ ಆ್ಯಂಡರ್ಸನ್(42ನೇ ನಿಮಿಷ) ಹಾಗೂ ನಾಥನ್ ಎಫ್ರಮ್ಸ್(45ನೇ ನಿಮಿಷ)ತಲಾ ಒಂದು ಫೀಲ್ಡ್ ಗೋಲು ಗಳಿಸಿದರು.

ಭಾರತ ಹಾಕಿ ತಂಡ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಎರಡು ಗೋಲು ಗಳಿಸಿತು. ಜುಗ್ರಾಜ್ ಸಿಂಗ್(9ನೇ ನಿಮಿಷ) ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್(30ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.

ಆಸ್ಟ್ರೇಲಿಯ ಆರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. ಆರಂಭಿಕ ಮುನ್ನಡೆಯ ನಂತರ ಆಸ್ಟ್ರೇಲಿಯ ಸತತ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಭಾರತದ ಆಟಗಾರರು ಇದಕ್ಕೆ ತಡೆಯಾದರು.

ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತೀಯರು ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರು. 9ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್‌ನ್ನು ಜುಗ್ರಾಜ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಈ ಗೋಲು ಭಾರತಕ್ಕೆ ಸಾಕಷ್ಟು ಆತ್ಮವಿಶ್ವಾಸ ತಂದಿತು.

ಮೊದಲಾರ್ಧ ಕೊನೆಗೊಳ್ಳಲು 41 ಸೆಕೆಂಡ್ ಬಾಕಿ ಇರುವಾಗ ನಾಯಕ ಹರ್ಮನ್‌ಪ್ರೀತ್ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿದರು. ಹರ್ಮನ್‌ಪ್ರೀತ್ ವೃತ್ತಿಜೀವನದಲ್ಲಿ 180ನೇ ಗೋಲು ಗಳಿಸಿದರು.

ದ್ವಿತಿಯಾರ್ಧದಲ್ಲಿ ಆಸ್ಟ್ರೇಲಿಯ ತಂಡ ಮೂರು ಗೋಲುಗಳನ್ನು ಗಳಿಸಿ ಭಾರತದ ವಿರುದ್ಧ ಪ್ರಾಬಲ್ಯ ಮೆರೆದರು. 34ನೇ ನಿಮಿಷದಲ್ಲಿ ಹೆವಾರ್ಡ್ ಅವರು ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿ ಪಂದ್ಯದಲ್ಲಿ 2ನೇ ಗೋಲು ಗಳಿಸಿದರು. 42ನೇ ಹಾಗೂ 45ನೇ ನಿಮಿಷದಲ್ಲಿ ಇನ್ನೂ ಎರಡು ಗೋಲುಗಳನ್ನು ಗಳಿಸಿದ ಆಸ್ಟ್ರೇಲಿಯ ಸತತ ಎರಡನೇ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಸರಣಿಯ ಮೂರನೇ ಪಂದ್ಯವು ಎಪ್ರಿಲ್ 10ರಂದು ನಡೆಯಲಿದೆ. ಈ ಸರಣಿಯು ಉಭಯ ತಂಡಗಳಿಗೆ ಈ ವರ್ಷ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಪೂರ್ವ ತಯಾರಿಗೆ ಪೂರಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News