ಆಸ್ಪತ್ರೆಗೆ ದಾಖಲಾದ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್
ಚೆನ್ನೈ: ವಿಶ್ವಕಪ್ 2023ರ ಆಸ್ಟ್ರೇಲಿಯಾ ತಂಡದೆದುರಿನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರೂ, ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಕೆಲ ದಿನಗಳ ಹಿಂದೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದು, ಅವರ ಆರೋಗ್ಯವಿನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಈಗಲೂ ಅಲಭ್ಯರಾಗಿದ್ದಾರೆ. ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದೆದುರು ಆಡಲಿರುವ ತನ್ನ ಎರಡನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಆಡುವ ಸಾಧ್ಯತೆಯನ್ನು ಬಿಸಿಸಿಐ ತಳ್ಳಿ ಹಾಕಿದೆ. ವಾಸ್ತವವಾಗಿ, ಶುಭಮನ್ ಗಿಲ್ ರ ಪ್ಲೇಟ್ ಲೆಟ್ ಸಂಖ್ಯೆಯಲ್ಲಿ ಕುಸಿತವಾಗಿರುವದರಿಂದ ಅವರನ್ನು ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ ndtv.com ವರದಿ ಮಾಡಿದೆ.
ಶುಭಮನ್ ಗಿಲ್ ಅವರ ಆರೋಗ್ಯದಲ್ಲಿನ ಚೇತರಿಕೆಯನ್ನು ಬಿಸಿಸಿಐ ವೈದ್ಯಕೀಯ ತಂಡವು ನಿಕಟವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ. ಆದರೆ, ಸದ್ಯ ಅವರು ತಂಡಕ್ಕೆ ಮರಳುವ ಯಾವ ಸಾಧ್ಯತೆಯೂ ಇಲ್ಲವಾಗಿದೆ. ಕೆಲ ಕಾಲ ಅವರ ಪ್ಲೇಟ್ ಲೆಟ್ ಸಂಖ್ಯೆಯಲ್ಲಿ ಕುಸಿತವಾಗಿದ್ದರಿಂದ ಬಿಸಿಸಿಐ ಆಡಳಿತ ಮಂಡಳಿಯು ಅವರನ್ನು ಚೆನ್ನೈನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಸ್ಥಳಾಂತರಿಸಿದೆ.
Cricbuzz ವರದಿಯ ಪ್ರಕಾರ, ಗಿಲ್ ರ ಪ್ಲೇಟ್ ಲೆಟ್ ಸಂಖ್ಯೆ ಕಡಿಮೆ ಇದ್ದು, ಇದೇ ಕಾರಣಕ್ಕಾಗಿ ಅಫ್ಘಾನಿಸ್ತಾನದೆದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡದ ಸಹ ಆಟಗಾರರೊಂದಿಗೆ ಗಿಲ್ ಅವರನ್ನು ಕಳಿಸದಿರಲು ಬಿಸಿಸಿಐ ನಿರ್ಧರಿಸಿತು ಎಂದು ಹೇಳಲಾಗಿದೆ.
ಚೆನ್ನೈನ ಕಾವೇರಿ ಮಲ್ಟಿ ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶುಭಮನ್ ಗಿಲ್ ದಾಖಲಾಗಿದ್ದಾರೆ ಎಂದು ವರದಿಯಾಗಿದ್ದು, ವೈದ್ಯ ರಿಝ್ವಾನ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.