‘ಟೈಮ್ಡ್‌ ಔಟ್‌’ ವಿವಾದ: ಪಂದ್ಯದ ನಂತರ ಬಾಂಗ್ಲಾ ಆಟಗಾರರೊಂದಿಗೆ ಹಸ್ತಲಾಘವಕ್ಕೆ ನಿರಾಕರಿಸಿದ ಶ್ರೀಲಂಕಾ ಆಟಗಾರರು

Update: 2023-11-07 06:45 GMT

Photo: PTI

ಹೊಸದಿಲ್ಲಿ: ಹೊಸದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ಗೆಲುವಿನ ನಂತರ ಶ್ರೀಲಂಕಾ ಆಟಗಾರರು ಬಾಂಗ್ಲಾದೇಶ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.

ಶ್ರೀಲಂಕಾದ ಆಟಗಾರ ಆ್ಯಂಜೆಲೊ ಮ್ಯಾಥ್ಯೂಸ್‌ ಅವರು ಟೈಮ್ಸ್‌ ಔಟ್‌ ಆದ ನಂತರ ವಿವಾದ ಹುಟ್ಟಿಕೊಂಡಿತ್ತು. ವಿಶ್ವಕಪ್‌ ನಿಯಮಗಳ ಪ್ರಕಾರ ಮ್ಯಾಥ್ಯೂಸ್‌ ಅವರು ಎರಡು ನಿಮಿಷಗಳೊಳಗೆ ಕ್ರೀಸ್‌ಗೆ ಆಗಮಿಸಿ ಚೆಂಡನ್ನು ಎದುರಿಸದೇ ಇದ್ದ ಕಾರಣ ಬಾಂಗ್ಲಾದೇಶ ಆಟಗಾರರ ಅಪೀಲನ್ನು ಪರಿಗಣಿಸಿ ಅಂಪೈರ್‌ ಅವರನ್ನು ʼಟೈಮ್ಡ್‌ ಔಟ್‌ʼ ಮಾಡಿದ್ದರು.

ಬಾಂಗ್ಲಾದೇಶ ಆಟಗಾರರು ಟೈಮ್ಡ್‌ ಔಟ್‌ಗೆ ಅಪೀಲು ಮಾಡಿದ್ದರು. ಅಪೀಲನ್ನು ವಾಪಸ್‌ ಪಡೆಯಲು ಮ್ಯಾಥ್ಯೂಸ್‌ ವಿನಂತಿಸಿದ್ದರೂ ಅವರು ನಿರಾಕರಿಸಿದ್ದರು. ನಂತರ ಅಂಪೈರ್‌ ಟೈಮ್ಡ್‌ ಔಟ್‌ ನಿರ್ಧಾರ ಪ್ರಕಟಿಸಿದ್ದರಿಂದ ಮ್ಯಾಥ್ಯೂಸ್‌ ಮೈದಾನದಿಂದ ಒಲ್ಲದ ಮನಸ್ಸಿನಿಂದ ಹೊರನಡೆಯಬೇಕಾಗಿ ಬಂದಿತ್ತು ಹಾಗೂ ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೈಮ್ಡ್‌ ಔಟ್‌ ಆದ ಮೊದಲ ಆಟಗಾರರಾದರು.

ನಂತರ ಶ್ರೀಲಂಕಾ ಬೌಲಿಂಗ್‌ ವೇಳೆ ಮ್ಯಾಥ್ಯೂಸ್‌ ಅವರ ಕೈಯ್ಯಲ್ಲೇ ಶಾಕಿಬ್‌ ಮತ್ತು ಶಾಂಟೊ ಔಟ್‌ ಆಗಿದ್ದರು. ಶಾಂಟೊ ಅವರೇ ಶಾಕಿಬ್‌ಗೆ ಟೈಮ್ಡ್‌ ಔಟ್‌ ನಿಯಮದ ಬಗ್ಗೆ ಮಾಹಿತಿ ನೀಡಿದ್ದರು. ಈ ಕಾರಣ ಶಾಕಿಬ್‌ ಅವರು ಅಪೀಲು ಮಾಡಿದ್ದರು.

ಈ ʼಟೈಮ್ಡ್‌ ಔಟ್‌ʼ ವಿವಾದ ಹಾಗೂ ಅಪೀಲು ಸಲ್ಲಿಸಿದ್ದ ತಂಡ ಬಾಂಗ್ಲಾದೇಶ ಗೆದ್ದ ನಂತರ ಶ್ರೀಲಂಕಾ ತಂಡವು ಹಸ್ತಲಾಘವಕ್ಕೆ ನಿರಾಕರಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News