ನಾಳೆ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಫೈನಲ್ | ಚೊಚ್ಚಲ ಪ್ರಶಸ್ತಿಗಾಗಿ ಕಿವೀಸ್, ಹರಿಣಗಳ ಪೈಪೋಟಿ

Update: 2024-10-19 16:57 GMT

Photo :x/@T20WorldCup

ದುಬೈ : ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ರವಿವಾರ ನ್ಯೂಝಿಲ್ಯಾಂಡ್ ತಂಡವು ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ. ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾವುದೇ ತಂಡ ವಿಜಯಿಯಾದರೂ ಆ ತಂಡದ ಚೊಚ್ಚಲ ಪ್ರಶಸ್ತಿಯಾಗಲಿದೆ.

ನ್ಯೂಝಿಲ್ಯಾಂಡ್ ಮಹಿಳಾ ತಂಡವು 2000ದಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಆದರೆ, ಹಾಲಿ ತಂಡದ ಯಾವುದೇ ಸದಸ್ಯರು ಆ ಐತಿಹಾಸಿಕ ವಿಜಯ ಗಳಿಸಿದ ತಂಡದ ಭಾಗವಾಗಿಲ್ಲ. ಪ್ರಸಕ್ತ ವಿಶ್ವಕಪ್ ಆರಂಭಗೊಳ್ಳುವ ಮೊದಲು, ಸತತ 10 ಟಿ20 ಪಂದ್ಯಗಳನ್ನು ಸೋತು ಅಸ್ತವ್ಯಸ್ತ ಸ್ಥಿತಿಯಲ್ಲಿತ್ತು. ಆದರೆ, ನಾಯಕಿ ಸೋಫೀ ಡಿವೈನ್ ನೇತೃತ್ವದ ಹಾಗೂ ಸೂಝೀ ಬೇಟ್ಸ್ ಮತ್ತು ಅಮೇಲಿಯಾ ಕೆರ್ ಅವರನ್ನು ಒಳಗೊಂಡ ತಂಡವು ಅಮೋಘ ಪ್ರದರ್ಶನ ನೀಡಿದೆ. ಅದರ ಫಲವಾಗಿ ತಂಡವು ಅತ್ಯುನ್ನತ ಗೌರವಕ್ಕಾಗಿ ನಾಳೆ ಪಂದ್ಯಾವಳಿಯ ಫೈನಲ್‌ನಲ್ಲಿ ಆಡುವ ಅರ್ಹತೆಯನ್ನು ಪಡೆದಿದೆ.

ಬಹುಷಃ ಜಾಗತಿಕ ಪಂದ್ಯಾವಳಿಯೊಂದರಲ್ಲಿ ಡಿವೈನ್, ಬೇಟ್ಸ್ ಮತ್ತು ಲೀ ಟಹುಹು ನ್ಯೂಝಿಲ್ಯಾಂಡ್ ಪರವಾಗಿ ಆಡುವುದು ನಾಳೆ ಕೊನೆಯ ಬಾರಿಯಾಗಿರಬಹುದು. 35 ವರ್ಷದ ಡಿವೈನ್ ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಗಳಲ್ಲಿ 7,000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಅದೇ ವೇಳೆ, 37 ವರ್ಷದ ಬೇಟ್ಸ್ ಈ ಮಾದರಿಗಳಲ್ಲಿ 10,000ಕ್ಕೂ ಅಧಿಕ ರನ್‌ಗಳನ್ನು ಹೊಂದಿದ್ದಾರೆ. 34 ವರ್ಷದ ವೇಗಿ ಟಹುಹು ಏಕದಿನ ಪಂದ್ಯಗಳಲ್ಲಿ 112 ವಿಕೆಟ್‌ಗಳು ಮತ್ತು ಟಿ20 ಪಂದ್ಯಗಳಲ್ಲಿ 93 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಆಫ್ರಿಕ ತಂಡವು, ಪ್ರಶಸ್ತಿಗಾಗಿನ ತನ್ನ ಈವರೆಗಿನ ಅಪೂರ್ಣ ಅಭಿಯಾನವನ್ನು ಪೂರ್ಣಗೊಳಿಸುವ ಇರಾದೆಯಲ್ಲಿದೆ. 2023ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಅದು ಆಸ್ಟ್ರೇಲಿಯ ವಿರುದ್ಧ ಸೋಲನುಭವಿಸಿತು. ಆ ನೋವಿನ ನೆನಪುಗಳನ್ನು ಅಳಿಸಿ ಹೊಸ ದಾಖಲೆಯೊಂದನ್ನು ಬರೆಯಲು ದಕ್ಷಿಣ ಆಫ್ರಿಕ ಮಹಿಳೆಯರು ಸಿದ್ಧರಾಗಿದ್ದಾರೆ.

ನ್ಯೂಝಿಲ್ಯಾಂಡ್ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಏರಿದೆ. ಅದು ತನ್ನ ಆರಂಭಿಕ ಪಂದ್ಯದಲ್ಲಿ ಭಾರತವನ್ನು ದೊಡ್ಡ ಅಂತರದಿಂದ ಸೋಲಿಸುವ ಮೂಲಕ ತನ್ನ ಅಭಿಯಾನಕ್ಕೆ ಅತ್ಯುತ್ತಮ ಚಾಲನೆಯನ್ನು ನೀಡಿತ್ತು. ಬಳಿಕ ಅದು ಕ್ರೀಡೆಯ ಎಲ್ಲಾ ವಿಭಾಗಗಳಲ್ಲಿ ಸ್ಥಿರ ನಿರ್ವಹಣೆ ನೀಡತ್ತಾ ಬಂದಿದೆ.

ಈ ಶತಮಾನದ ಆರಂಭಿಕ ದಶಕದ ಕೊನೆಯಲ್ಲಿ ಮಹಿಳಾ ಟಿ20 ವಿಶ್ವಕಪ್ ಆರಂಭಗೊಂಡಾಗ, ನ್ಯೂಝಿಲ್ಯಾಂಡ್ ಬಲಿಷ್ಠ ತಂಡದಂತೆ ಕಂಡುಬಂದಿತ್ತು. ಅದು ಸತತ ಎರಡು ಬಾರಿ ಫೈನಲ್ ತಲುಪಿತ್ತು. ಆದರೆ, ಆ ಫೈನಲ್‌ಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳ ಎದುರು ಸೋಲನುಭವಿಸಿತು. ಆ ತಂಡಗಳಲ್ಲಿದ್ದ ಬೇಟ್ಸ್ ಮತ್ತು ಡಿವೈನ್‌ಗೆ, 2000ದ ಬಳಿಕ ನ್ಯೂಝಿಲ್ಯಾಂಡ್‌ನ ಮೊದಲ ಐಸಿಸಿ ಟ್ರೋಫಿಯೊಂದನ್ನು ಗೆಲ್ಲಿಸಿಕೊಡಲು ಸಿಕ್ಕ ಮೂರನೇ ಅವಕಾಶ ಇದಾಗಿದೆ.

ಆದರೆ, ಅದರ ಮುಂದೆ ಇರುವುದು ಬಲಿಷ್ಠ ದಕ್ಷಿಣ ಆಫ್ರಿಕ. ದಕ್ಷಿಣ ಆಫ್ರಿಕವು ಇನ್ನೊಂದು ಬಲಿಷ್ಠ ತಂಡ ಆಸ್ಟ್ರೇಲಿಯವನ್ನು ಅದರ ಸತತ 8ನೇ ಫೈನಲ್‌ನಿಂದ ವಂಚಿಸಿ ಒಂದು ರೀತಿಯ ಇತಿಹಾಸವನ್ನೇ ಸೃಷ್ಟಿಸಿದೆ. ದಕ್ಷಿಣ ಆಫ್ರಿಕದ ಆಲ್‌ರೌಂಡ್ ಸಾಮರ್ಥ್ಯವು ನ್ಯೂಝಿಲ್ಯಾಂಡ್‌ಗೆ ತೀವ್ರ ಸ್ಪರ್ಧೆಯನ್ನು ನೀಡಲಿದೆ.

►ತಂಡಗಳು

ನ್ಯೂಝಿಲ್ಯಾಂಡ್: ಸೋಫೀ ಡಿವೈನ್ (ನಾಯಕಿ), ಸೂಝೀ ಬೇಟ್ಸ್, ಈಡನ್ ಕಾರ್ಸನ್, ಇಸಾಬೆಲಾ ಗೇಝ್ (ವಿಕೆಟ್‌ ಕೀಪರ್), ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಫ್ರಾನ್ ಜೊನಾಸ್, ಲೇ ಕ್ಯಾಸ್ಪರೆಕ್, ಅಮೇಲಿಯಾ ಕೆರ್, ಜೆಸ್ ಕೆರ್, ರೋಸ್‌ಮೇರಿ ಮೇರ್, ಮಾಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮರ್‌ಹನಾ ರೋವ್ ಮತ್ತು ಲೀ ಟಹುಹು.

ದಕ್ಷಿಣ ಆಫ್ರಿಕ: ಲಾರಾ ವೊಲ್ವಾರ್ಟ್ (ನಾಯಕಿ), ಆ್ಯನೆಕ್ ಬೋಶ್, ಟಝ್ಮಿನ್ ಬ್ರಿಟ್ಸ್, ನ್ಯಾಡೈನ್ ಡಿ ಕ್ಲರ್ಕ್, ಆ್ಯನರೀ ಡರ್ಕ್‌ಸನ್, ಮೀಕ್ ಡಿ ರೈಡರ್ (ವಿಕೆಟ್‌ ಕೀಪರ್), ಅಯಂಡಾ ಹಲುಬಿ, ಸಿನಾಲೊ ಜಾಫ್ಟ (ವಿಕೆಟ್‌ಕೀಪರ್), ಮರಿಝಾನ್ ಕ್ಯಾಪ್, ಅಯಬೊಂಗ ಖಾಕ, ಸುನ್ ಲೂಸ್, ನೊಂಕುಲುಲೆಕೊ ಮಲಾಬ, ಸೆಶೈನ್ ನಾಯ್ಡು, ಟುಮಿ ಸೆಖುಖುನೆ ಮತ್ತು ಕ್ಲೋ ಟ್ರಯಾನ್.

ಪಂದ್ಯ ಆರಂಭ: ಸಂಜೆ 7:30 (ಭಾರತೀಯ ಕಾಲಮಾನ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News