ಸಿಡ್ನಿಯಲ್ಲಿ ವಾರ್ನರ್ ವಿದಾಯದ ಪಂದ್ಯಕ್ಕೆ ವೇದಿಕೆ ಸಿದ್ಧ

Update: 2024-01-01 16:37 GMT

ಡೇವಿಡ್ ವಾರ್ನರ್ | Photo :  PTI 

ಸಿಡ್ನಿ : ಡೇವಿಡ್ ವಾರ್ನರ್ ಗೆ ತವರು ಪಟ್ಟಣದಲ್ಲಿ ಟೆಸ್ಟ್ ಕ್ರಿಕೆಟ್‌ ನಿಂದ ವಿದಾಯ ಕೋರಲು ವೇದಿಕೆ ಸಿದ್ಧವಾಗಿದ್ದು, ಆಸ್ಟ್ರೇಲಿಯವು ಸಿಡ್ನಿಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ನಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತನ್ನ 12 ವರ್ಷಗಳ ಟೆಸ್ಟ್ ವೃತ್ತಿಬದುಕಿಗೆ ವಿದಾಯ ಹೇಳುವೆ ಎಂದು ವಾರ್ನರ್ ಜೂನಿನಲ್ಲಿ ಘೋಷಿಸಿದ್ದರು. ಸರಣಿಯಲ್ಲಿ ಸದ್ಯ ಆಸ್ಟ್ರೇಲಿಯವು 2-0 ಮುನ್ನಡೆಯಲ್ಲಿದೆ.

ರಾಷ್ಟ್ರೀಯ ಆಯ್ಕೆ ಸಮಿತಿಯು ಮೆಲ್ಬರ್ನ್ ನಲ್ಲಿ ಆಡಿದ್ದ ತಂಡವನ್ನೇ ಸಿಡ್ನಿಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ. ನಾವು ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತಹರಿಸಿದ್ದೇವೆ. ಡೇವಿಡ್ ವಾರ್ನರ್ ಅವರ ಅಂತಿಮ ಟೆಸ್ಟ್ ಪಂದ್ಯವನ್ನು ಸಂಭ್ರಮಿಸಲು ಎದುರು ನೋಡುತ್ತಿದ್ದೇವೆ ಎಂದು ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.

ವಾರ್ನರ್ ಪ್ರಸಕ್ತ ಸರಣಿಗೂ ಮೊದಲ ಟೆಸ್ಟ್ ಕ್ರಿಕೆಟ್‌ ನಲ್ಲಿ ರನ್ ಬರ ಎದುರಿಸಿದ್ದರು. ಪರ್ತ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ನಲ್ಲಿ 164 ರನ್ ಸಿಡಿಸಿ ಅಬ್ಬರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಆಸ್ಟ್ರೇಲಿಯವು ಮೊದಲ ಪಂದ್ಯವನ್ನು 360 ರನ್ನಿಂದ ಗೆದ್ದುಕೊಂಡಿತ್ತು. ಹಿಂದಿನ ವಾರ ಮೆಲ್ಬರ್ನ್ ನಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ 10 ವಿಕೆಟ್ ಗೊಂಚಲು ಪಡೆದು ಪಾಕ್ ವಿರುದ್ಧ ಆಸೀಸ್ ಗೆ 79 ರನ್ ಗೆಲುವು ತಂದುಕೊಟ್ಟಿದ್ದರು. ಆಸ್ಟ್ರೇಲಿಯವು ಸ್ವದೇಶದಲ್ಲಿ ಸತತ 4ನೇ ಸರಣಿ ಗೆದ್ದುಕೊಂಡಿತು. 2021-22ರ ಆ್ಯಶಸ್ ಸರಣಿಗಿಂತ ಮೊದಲು ನಾಯಕತ್ವವಹಿಸಿಕೊಂಡಿದ್ದ ಕಮಿನ್ಸ್ 12 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದೆ.

ಪಾಕಿಸ್ತಾನವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ 3ನೇ ಪಂದ್ಯದಲ್ಲಿ ಸುಮಾರು ಮೂರು ದಶಕಗಳ ನಂತರ ಮೊದಲ ಟೆಸ್ಟ್ ಪಂದ್ಯ ಗೆಲುವಿನತ್ತ ದೃಷ್ಟಿ ಹರಿಸಿದೆ.

ಆಸ್ಟ್ರೇಲಿಯ ಟೆಸ್ಟ್ ತಂಡ

ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕಾರೆ, ಕ್ಯಾಮರೂನ್ ಗ್ರೀನ್, ಜೋಶ್ ಹೇಝಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯೊನ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News