ನಾಳೆ ನಾಲ್ಕನೇ ಟ್ವೆಂಟಿ-20 ಪಂದ್ಯ | ಝಿಂಬಾಬ್ವೆ ವಿರುದ್ಧ ಸರಣಿ ಗೆಲುವಿನತ್ತ ಭಾರತದ ಚಿತ್ತ

Update: 2024-07-12 15:37 GMT
PC : PTI 

ಹರಾರೆ : ಝಿಂಬಾಬ್ವೆ ವಿರುದ್ಧ ಶನಿವಾರ ನಡೆಯಲಿರುವ ನಾಲ್ಕನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಹಲವು ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮೂಲಕ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭಿಸುವತ್ತ ಚಿತ್ತಹರಿಸಿದ್ದಾರೆ.

ಶುಭಮನ್ ಗಿಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಸರಣಿಯ ಮೊದಲ ಪಂದ್ಯವನ್ನು ಸೋತ ನಂತರ ಎರಡನೇ ಹಾಗೂ ಮೂರನೇ ಪಂದ್ಯಗಳಲ್ಲಿ ಜಯ ದಾಖಲಿಸಿ 5 ಪಂದ್ಯಗಳ ಸರಣಿಯಲ್ಲಿ ಸದ್ಯ 2-1 ಮುನ್ನಡೆ ಸಾಧಿಸಿದೆ.

ಝಿಂಬಾಬ್ವೆ ವಿರುದ್ಧ ಸರಣಿ ಗೆಲುವು ಕೆಲವು ಯುವ ಆಟಗಾರರಿಗೆ ಸ್ಫೂರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇತ್ತೀಚೆಗೆ ಮೂವರು ಶ್ರೇಷ್ಠ ಆಟಗಾರರ ನಿವೃತ್ತಿಯಿಂದಾಗಿ ಬಡವಾಗಿರುವ ತಂಡವನ್ನು ಶಕ್ತಿಯುತವನ್ನಾಗಿಸಲು ಈಗಿನ ತಂಡದ ಆಟಗಾರರು ಬಯಸಿದ್ದಾರೆ.

ರವೀಂದ್ರ ಜಡೇಜ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾದ ನಂತರ ವಾಶಿಂಗ್ಟನ್ ಸುಂದರ್ ಸ್ಪಿನ್ ಆಲ್‌ರೌಂಡರ್ ಸ್ಥಾನ ತುಂಬುವ ಪ್ರಯತ್ನದಲ್ಲಿದ್ದಾರೆ. ತಮಿಳುನಾಡಿನ ಆಟಗಾರ ಝಿಂಬಾಬ್ವೆ ವಿರುದ್ಧ 4.5 ಇಕಾನಮಿ ರೇಟ್‌ನಲ್ಲಿ ಒಟ್ಟು 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಶ್ರೀಲಂಕಾದ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲು ಸಭೆ ಸೇರಲಿರುವ ಆಯ್ಕೆ ಸಮಿತಿಯು ಸುಂದರ್ ಹೆಸರನ್ನು ಪ್ರಮುಖವಾಗಿ ಪರಿಗಣಿಸಬಹುದು. 24ರ ಹರೆಯದ ಸುಂದರ್ ಪವರ್‌ಪ್ಲೇಗೆ ಮೊದಲು ಹಾಗೂ ಆನಂತರ ಬೌಲಿಂಗ್ ಮಾಡಬಲ್ಲರು. ಕೆಳ ಕ್ರಮಾಂಕದ ಉಪಯುಕ್ತ ಬ್ಯಾಟರ್ ಆಗಿರುವ ಸುಂದರ್ ಅಗತ್ಯಬಿದ್ದರೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಮಾಡಬಲ್ಲರು.

ಅಭಿಷೇಕ್ ಶರ್ಮಾ ತನ್ನ ಎರಡನೇ ಟಿ20 ಅಂತರರಾರಾಷ್ಟ್ರೀಯ ಪಂದ್ಯದಲ್ಲಿ 47 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿದ್ದು, ಭಾರತದ ಭವಿಷ್ಯದ ಸ್ಟಾರ್ ಆಗುವ ಆಶಾವಾದ ಮೂಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ. ಅಗ್ರ ಸರದಿಯ ಎರಡು ಸ್ಥಾನಗಳಲ್ಲಿ ಒಂದನ್ನು ಗಿಟ್ಟಿಸಿಕೊಳ್ಳುವ ಫೇವರಿಟ್ ಆಟಗಾರ ಯಶಸ್ವಿ ಜೈಸ್ವಾಲ್. ಎರಡನೇ ಅಗ್ರ ಸರದಿಯ ಆಟಗಾರನ ಸ್ಥಾನವನ್ನು ಪಡೆಯಲು ಅಭಿಷೇಕ್ ಪ್ರಯತ್ನ ಆರಂಭಿಸಿದ್ದಾರೆ. ಈ ಸ್ಥಾನಕ್ಕಾಗಿ ಇಬ್ಬರು ಪ್ರಬಲ ಅಭ್ಯರ್ಥಿಗಳಾದ ಶುಭಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ನಡುವೆ ತೀವ್ರ ಸ್ಪರ್ಧೆ ಇದೆ.

ಶಿವಂ ದುಬೆ ಹಾಗೂ ಸಂಜು ಸ್ಯಾಮ್ಸನ್ ಐತಿಹಾಸಿಕ ಟಿ20 ವಿಶ್ವಕಪ್ ಜಯಿಸಿದ ನಂತರ ಮುಂಬೈನಲ್ಲಿ ತೆರೆದ ಬಸ್‌ನಲ್ಲಿ ವಿಜಯೋತ್ಸವದ ಮೆರೆವಣಿಗೆಯಲ್ಲಿ ಭಾಗವಹಿಸಿದ ಬಳಿಕ ಝಿಂಬಾಬ್ವೆಗೆ ತೆರಳಿ ತಂಡವನ್ನು ಸೇರಿಕೊಂಡಿದ್ದಾರೆ.

ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದುಬೆ ಹಾಗೂ ಸ್ಯಾಮನ್ಸ್ ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅವಕಾಶ ಲಭಿಸಿದೆ.

ಬೌಲರ್ಗಳ ಪ್ರದರ್ಶನ ಅದರಲ್ಲೂ ಮುಖ್ಯವಾಗಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಗೂಗ್ಲಿ ಮೂಲಕ ಆತಿಥೇಯ ತಂಡದ ಹೊಡಿಬಡಿ ದಾಂಡಿಗರನ್ನು ಕಂಗೆಡಿಸಿದ್ದಾರೆ. ಈ ಮೂಲಕ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ನ ಗಮನ ಸೆಳೆದಿದ್ದಾರೆ.

ವಾಶಿಂಗ್ಟನ್ ಸುಂದರ್‌ರಂತೆಯೇ ರವಿ ಬಿಷ್ಣೋಯ್ ಕೂಡ ಸರಣಿಯಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 4 ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಅವೇಶ್ ಖಾನ್ ಬದಲಿಗೆ ಹಿಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮುಕೇಶ್ ಕುಮಾರ್ ಆಡುವ ಸಾಧ್ಯತೆಯಿದೆ.

ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ನಂತರ ಝಿಂಬಾಬ್ವೆ ಸತತ 2 ಪಂದ್ಯಗಳಲ್ಲಿ ಎಡವಿದೆ. 2ನೇ ಪಂದ್ಯದಲ್ಲಿ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರ್ಬಾನಿ ಉತ್ತಮ ಬೌಲಿಂಗ್ ಹಾಗೂ ಡಿಯೊನ್ ಮೈಯರ್ಸ್ ಬಿರುಸಿನ ಅರ್ಧಶತಕದಿಂದ ತಂಡದ ಗೆಲುವಿಗಾಗಿ ಹೋರಾಡಿದ್ದರು.

ಪಂದ್ಯ ಆರಂಭದ ಸಮಯ: ಸಂಜೆ 4:30

(ಭಾರತದ ಕಾಲಮಾನ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News