ಹಿರಿಯರ ತಂಡದ ಕೋಚ್ ಆಗುವುದಕ್ಕೂ ಮುನ್ನ, ರಾಹುಲ್ ದ್ರಾವಿಡ್ ರಂತೆ ಕಿರಿಯ ಆಟಗಾರರನ್ನು ಸಿದ್ಧಪಡಿಸಲು ಬಯಸಿದ್ದೇನೆ : ಹಾಕಿ ದಂತಕತೆ ಪಿ.ಆರ್.ಶ್ರೀಜೇಶ್

Update: 2024-08-14 05:24 GMT

Photo: PTI

ಹೊಸದಿಲ್ಲಿ: “ನಾನು ಹಿರಿಯರ ತಂಡದ ತರಬೇತದಾರನಾಗುವುದಕ್ಕೂ ಮುನ್ನ ಕಿರಿಯರನ್ನು ತರಬೇತುಗೊಳಿಸಲು ಬಯಸಿದ್ದೇನೆ” ಎಂದು ಭಾರತೀಯ ಹಾಕಿ ದಂತ ಕತೆ ಪಿ.ಆರ್.ಶ್ರೀಜೇಶ್ ಹೇಳಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ರಂಗದ ದಂತ ಕತೆಯಾದ ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿಯಾದ ಪಿ.ಆರ್.ಶ್ರೀಜೇಶ್, ಅವರಂತೆಯೆ ಮೊದಲಿಗೆ 19 ವರ್ಷ ವಯಸ್ಸಿನೊಳಗಿನವರು, ಭಾರತ ಎ ತಂಡ ಹಾಗೂ ಭಾರತ ಹಿರಿಯರ ತಂಡವನ್ನು ಹಂತಹಂತವಾಗಿ ತರಬೇತುಗೊಳಿಸಿದಂತೆ ತಾನೂ ಕೂಡಾ ತರಬೇತುದಾರನಾಗಿ ಮೇಲೇರಲು ಬಯಸಿದ್ದೇನೆ ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಪಿಟಿಐ ಸಂಪಾದಕರೊಂದಿಗೆ ಅದರ ಮುಖ್ಯ ಕಚೇರಿಯಲ್ಲಿ ಮಾತಕತೆ ನಡೆಸಿದ ಶ್ರೀಜೇಶ್, “ನಾನು ತರಬೇತುದಾರನಾಗಲು ಬಯಸಿದ್ದೇನೆ. ಆದರೆ, ಅದು ಯಾವಾಗ ಎಂಬ ಪ್ರಶ್ನೆ ನನ್ನ ಮುಂದಿದೆ. ನಿವೃತ್ತಿಯ ನಂತರ ಕುಟುಂಬ ಮೊದಲು ಬರುತ್ತದೆ. ನಾನು ಮೊದಲು ಅವರೊಂದಿಗೆ ಮಾತನಾಡಿ, ಅವರಿಂದ ಈ ನಿರ್ಧಾರಕ್ಕೆ ಒಪ್ಪಿಗೆಯನ್ನು ಪಡೆಯಬೇಕಿದೆ. ನೀವೀಗ ಪತ್ನಿಯ ಮಾತುಗಳಿಗೆ ಕೊಂಚ ಕಿವಿಗೊಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ತರಬೇತುದಾರರಾಗಲು ದೃಢ ನಿರ್ಧಾರ ಮಾಡಿರುವ ಶ್ರೀ ಜೇಶ್, “ನಾನು ತರಬೇತುದಾರ ಹುದ್ದೆಯನ್ನು ಕಿರಿಯರ ತಂಡದೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ಇದಕ್ಕೆ ರಾಹುಲ್ ದ್ರಾವಿಡ್ ಅವರೇ ನಿದರ್ಶನ. ಒಂದು ವೇಳೆ, ನೀವು ಆಟಗಾರರ ಗುಂಪೊಂದನ್ನು ಅಭಿವೃದ್ಧಿ ಪಡಿಸಿದರೆ, ಅವರನ್ನು ನೀವು ಹಿರಿಯರ ತಂಡಕ್ಕೆ ಸೇರ್ಪಡೆ ಮಾಡಬಹುದು ಹಾಗೂ ಅವರು ನಿಮ್ಮನ್ನು ಅನುಸರಿಸುವಂತೆ ಮಾಡಬಹುದು” ಎಂದು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

“ನಾನು ತರಬೇತುದಾರನ ಕೆಲಸವನ್ನು ಮುಂದಿನ ವರ್ಷ, 2025ರಲ್ಲಿ ಪ್ರಾರಂಭಿಸಲಿದ್ದೇನೆ. ಇನ್ನೆರಡು ವರ್ಷಗಳಲ್ಲಿ ನಮ್ಮ ಮುಂದೆ ಕಿರಿಯರ ವಿಶ್ವ ಕಪ್ ಇದೆ. ಹಿರಿಯರ ತಂಡವೂ ವಿಶ್ವ ಕಪ್ ಆಡಲಿದೆ. ಹೀಗಾಗಿ, ನಾನು 2028ರ ವೇಳೆಗೆ ಸುಮಾರು 20ರಿಂದ 40 ಆಟಗಾರರನ್ನು ತಯಾರುಗೊಳಿಸಬಹುದು. 2029ರ ವೇಳೆಗೆ ಹಿರಿಯರ ತಂಡದಲ್ಲಿ 15-20 ಮಂದಿ ಆಟಗಾರರನ್ನು ಸೇರ್ಪಡೆ ಮಾಡಬಹುದು. 2030ರ ವೇಳೆಗೆ ಹಿರಿಯರ ತಂಡದಲ್ಲಿ ಬಹುತೇಕ 30-35 ಆಟಗಾರರು ಇರಲಿದ್ದಾರೆ” ಎಂದು ಅವರು ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.

“2032ರ ವೇಳೆಗೆ ನಾನು ಮುಖ್ಯ ತರಬೇತುದಾರ ಹುದ್ದೆಗೆ ಸಿದ್ಧನಿರುತ್ತೇನೆ. ಒಂದು ವೇಳೆ 2036ರ ಒಲಿಂಪಿಕ್ಸ್ ಆತಿಥ್ಯವನ್ನೇನಾದರೂ ಭಾರತ ಪಡೆದರೆ, ನಾನು ಆ ಸಂದರ್ಭದಲ್ಲಿ ಭಾರತ ತಂಡದ ತರಬೇತುದಾರನಾಗಲು ಬಯಸುತ್ತೇನೆ” ಎಂದೂ ಅವರು ಹೇಳಿಕೊಂಡಿದ್ದಾರೆ.

‘ಭಾರತದ ಗೋಡೆ’ ಎಂದೇ ಹಾಕಿ ಪ್ರೇಮಿಗಳಿಂದ ಕರೆಸಿಕೊಳ್ಳುವ ಭಾರತೀಯ ಹಾಕಿ ದಂತಕತೆ ಪಿ.ಆರ್. ಶ್ರೀಜೇಶ್, ಭಾರತ ತಂಡವು ಸತತ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಸತತ ಎರಡು ಕಂಚಿನ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News