ಗೆಲುವಿನೊಂದಿಗೆ ವಾರ್ನರ್ ವಿದಾಯ ; ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯ

Update: 2024-01-06 17:32 GMT

ಡೇವಿಡ್ ವಾರ್ನರ್ | Photo: PTI 

ಸಿಡ್ನಿ: ವಿದಾಯದ ಪಂದ್ಯವನ್ನಾಡಿದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(57 ರನ್) ಹಾಗೂ ಮಾರ್ನಸ್ ಲಾಬುಶೇನ್(ಔಟಾಗದೆ 62 ರನ್) ಅರ್ಧಶತಕದ ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.

4ನೇ ದಿನದಾಟವಾದ ಶನಿವಾರ 4ನೇ ಇನಿಂಗ್ಸ್ ನಲ್ಲಿ ಗೆಲ್ಲಲು 130 ರನ್ ಗುರಿ ಪಡೆದಿದ್ದ ಆಸ್ಟೇಲಿಯ ತಂಡ 25.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. 1995ರಿಂದ ಆಸ್ಟೇಲಿಯ ನೆಲದಲ್ಲಿ ಸತತ 16 ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡ ಇಂದು 7 ವಿಕೆಟ್ ನಷ್ಟಕ್ಕೆ 68 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ನಿನ್ನೆಯ ಮೊತ್ತಕ್ಕೆ 47 ರನ್ ಸೇರಿಸುವಷ್ಟರಲ್ಲಿ ಉಳಿದ 3 ವಿಕೆಟ್ ಕಳೆದುಕೊಂಡು ಭೋಜನ ವಿರಾಮಕ್ಕೆ ಮೊದಲು 43.1 ಓವರ್ ಗಳಲ್ಲಿ 115 ರನ್ ಗೆ ಆಲೌಟಾಯಿತು. ಆಸ್ಟ್ರೇಲಿಯ ಗೆಲುವಿಗೆ ಸುಲಭ ಗುರಿ ನೀಡಿತು.

ಜೋಶ್ ಹೇಝಲ್ವುಡ್(4-16) ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ನಾಥನ್ ಲಿಯೊನ್(3-36), ಸ್ಟಾರ್ಕ್(1-15),ಟ್ರಾವಿಸ್ ಹೆಡ್(1-19) ಹಾಗೂ ಕಮಿನ್ಸ್(1-24) ಉಳಿದ ವಿಕೆಟ್ ಗಳನ್ನು ಉರುಳಿಸಿದರು.

ಟೆಸ್ಟ್ ಕ್ರಿಕೆಟ್ನಲ್ಲಿ 112ನೇ ಹಾಗೂ ಕೊನೆಯ ಪಂದ್ಯವನ್ನಾಡಿದ ವಾರ್ನರ್ ಅವರು ಆರಂಭಿಕ ಜೊತೆಗಾರ ಹಾಗೂ ಬಾಲ್ಯದ ಗೆಳೆಯ ಉಸ್ಮಾನ್ ಖ್ವಾಜಾರನ್ನು ಆಲಿಂಗಿಸಿದರು. ವಾರ್ನರ್ ಕ್ರೀಸ್ ಗೆ ಆಗಮಿಸಿದಾಗ ಪಾಕಿಸ್ತಾನದ ಆಟಗಾರರು ಗೌರವ ರಕ್ಷೆ ನೀಡಿದರು.

ಖ್ವಾಜಾ ಆರಂಭಿಕ ಓವರ್ನಲ್ಲಿ ಖಾತೆ ತೆರೆಯುವ ಮೊದಲೇ ಸಾಜಿದ್ ಖಾನ್(2-49) ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ವಾರ್ನರ್ ತನ್ನ ಅಂತಿಮ ಇನಿಂಗ್ಸ್ ನಲ್ಲಿ ಸೊಗಸಾದ ಇನಿಂಗ್ಸ್ ಆಡಿದರು. ಸ್ಕ್ವಾರ್ ಲೆಗ್ನಲ್ಲಿ ಒಂದು ರನ್ ಗಳಿಸಿದ ವಾರ್ನರ್ 37ನೇ ಅರ್ಧಶತಕ ಪೂರೈಸಿದರು. ಆಸ್ಟ್ರೇಲಿಯ ಭೋಜನ ವಿರಾಮಕ್ಕೆ ಮೊದಲು 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು.

ಆಸ್ಟ್ರೇಲಿಯ ಗೆಲುವಿಗೆ 11 ರನ್ ಅಗತ್ಯವಿದ್ದಾಗ ಸ್ಪಿನ್ನರ್ ಸಾಜಿದ್ ಖಾನ್, ವಾರ್ನರ್ಗೆ ಪೆವಿಲಿಯನ್ ಹಾದಿ ತೋರಿಸಿದರು. ವಾರ್ನರ್ 75 ಎಸೆತಗಳ ಇನಿಂಗ್ಸ್ ನಲ್ಲಿ ಏಳು ಬೌಂಡರಿ ಬಾರಿಸಿದ್ದರು. ವಾರ್ನರ್ ಪೆವಿಲಿಯನ್ನತ್ತ ಹೆಜ್ಜೆ ಇಡುತ್ತಿದ್ದಾಗ ಅವರ ತವರು ಮೈದಾನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನೆರೆದಿದ್ದ 24,000ಕ್ಕೂ ಅಧಿಕ ಕ್ರಿಕೆಟ್ ಅಭಿಮಾನಿಗಳು ಎದ್ದುನಿಂತು ವಾರ್ನರ್ಗೆ ಗೌರವ ಸಲ್ಲಿಸಿದರು.

ವಾರ್ನರ್ 2011ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ನಂತರ 112 ಟೆಸ್ಟ್ ಪಂದ್ಯಗಳಲ್ಲಿ 44.59ರ ಸರಾಸರಿಯಲ್ಲಿ 26 ಶತಕಗಳ ಸಹಿತ 8,786 ರನ್ ಗಳಿಸಿದ್ದಾರೆ.

ವಾರ್ನರ್ ನಿರ್ಗಮನದ ನಂತರ ಮಾರ್ನಸ್ ಲಾಬುಶೇನ್(ಔಟಾಗದೆ 62, 73 ಎಸೆತ, 9 ಬೌಂಡರಿ)ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದರು. ಸ್ಟೀವನ್ ಸ್ಮಿತ್ ಔಟಾಗದೆ 4 ರನ್ ಗಳಿಸಿದರು.

ಶನಿವಾರ ಬೆಳಗ್ಗೆ ಮುಹಮ್ಮದ್ ರಿಝ್ವಾನ್ 28 ರನ್ ಗಳಿಸಿ ಸ್ಪಿನ್ನರ್ ನಾಥನ್ ಲಿಯೊನ್ ಗೆ ವಿಕೆಟ್ ಒಪ್ಪಿಸಿದರು. ಮೂರು ಎಸೆತಗಳ ನಂತರ ಆಮಿರ್ ಜಮಾಲ್ 18 ರನ್ ಗಳಿಸಿ ಔಟಾದರು. ಹಸನ್ ಅಲಿ(5 ರನ್) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಲಿಯೊನ್ ಪಾಕಿಸ್ತಾನದ ಇನಿಂಗ್ಸ್ ಗೆ ತೆರೆ ಎಳೆದರು.

ಪರ್ತ್ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಆರು ವಿಕೆಟ್ ಗೊಂಚಲು ಪಡೆದಿದ್ದ ವೇಗದ ಬೌಲರ್ ಜಮಾಲ್ ಸಿಡ್ನಿಯ ಮೊದಲ ಇನಿಂಗ್ಸ್ನಲ್ಲಿ ಮತ್ತೊಮ್ಮೆ ಮಿಂಚಿದ್ದರು. ಆದರೆ ಲಂಚ್ ವಿರಾಮದ ತನಕ ನಾಯಕ ಶಾನ್ ಮಸೂದ್, ಜಮಾಲ್ಗೆ ಬೌಲಿಂಗ್ ಮಾಡಲು ಅವಕಾಶ ನೀಡದ ನಿರ್ಧಾರ ಅಚ್ಚರಿ ಮೂಡಿಸಿತು.

ಪಾಕಿಸ್ತಾನದ ಆಲ್ರೌಂಡರ್ ಆಮಿರ್ ಜಮಾಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಜಮಾಲ್ ಮೊದಲ ಇನಿಂಗ್ಸ್ ನಲ್ಲಿ 82 ರನ್ ಹಾಗೂ 69 ರನ್ ಗೆ 6 ವಿಕೆಟ್ ಕಬಳಿಸಿದ್ದರು.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೆಲ್ಬರ್ನ್ ಟೆಸ್ಟ್ನಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದ ಕಮಿನ್ಸ್ ಸಿಡ್ನಿ ಟೆಸ್ಟ್ನ ಮೊದಲ ಇನಿಂಗ್ಸ್ ನಲ್ಲಿ 61 ರನ್ಗೆ ಐದು ವಿಕೆಟ್ ಗೊಂಚಲು ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News