ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ ಪಾಕಿಸ್ತಾನದ ಅರ್ಶದ್ ನದೀಮ್ ಕುರಿತು ನೀರಜ್ ಚೋಪ್ರಾ ಹೇಳಿದ್ದೇನು?

Update: 2024-08-09 11:52 GMT

  ನೀರಜ್ ಚೋಪ್ರಾ , ಅರ್ಶದ್ ನದೀಮ್  | PC : PTI 

ಹೊಸದಿಲ್ಲಿ: ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ ಪಾಕಿಸ್ತಾನದ ಪ್ರತಿಸ್ಪರ್ಧಿ ಅರ್ಶದ್ ನದೀಮ್ ರ ಅಮೋಘ ಪ್ರದರ್ಶನವನ್ನು ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಶಂಸಿಸಿದ್ದಾರೆ. 2016ರ ನಂತರ ಇದೇ ಪ್ರಥಮ ಬಾರಿಗೆ ಸ್ಪರ್ಧೆಯೊಂದರಲ್ಲಿ ಅರ್ಶದ್ ತನ್ನನ್ನು ಮೀರಿದ ಸಾಧನೆ ಮಾಡಿದ್ದಾರೆ ಎಂದು ಅವರು ಶ್ಲಾ ಘಿಸಿದ್ದಾರೆ.

“ನಾನು ಈವರೆಗೆ 90 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದಿಲ್ಲ. ಆದರೆ, ಎರಡನೆಯ ಪ್ರಯತ್ನದಲ್ಲಿ ಇದು ಆ ದಿನವಿರಬಹುದು ಎಂದು ನಾನು ಭಾವಿಸಿದ್ದೆ. ನನಗೆ ನನ್ನ ಬಗ್ಗೆ ವಿಶ್ವಾಸವಿದ್ದು, ಒಂದಲ್ಲ ಒಂದು ದಿನ ಆ ಮೈಲಿಗಲ್ಲನ್ನು ತಲುಪುತ್ತೇನೆ. ದೇಶದ ಧ್ವಜವನ್ನು ಹಿಡಿದುಕೊಂಡು, ದೇಶಕ್ಕಾಗಿ ಒಂದು ಪದಕವನ್ನು ಗೆಲ್ಲುವುದು ಅವಿಸ್ಮರಣೀಯ ಅನುಭವ” ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ತಮ್ಮ ಪ್ರಥಮ ಪ್ರಯತ್ನದ ಆರಂಭದಲ್ಲಿ ತಡವರಿಸಿದ ನೀರಜ್ ಚೋಪ್ರಾರ ಎಸೆತವನ್ನು ಅಮಾನ್ಯಗೊಳಿಸಲಾಯಿತು. ಆದರೆ, ಎರಡನೆ ಪ್ರಯತ್ನದಲ್ಲಿ ಈ ಋತುವಿನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, 89.45 ಮೀಟರ್ ದೂರ ಜಾವೆಲಿನ್ ಅನ್ನು ಎಸೆದರು. ಈ ಎಸೆತವು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅವರಿಗೆ ಚಿನ್ನದ ಪದಕವನ್ನು ಜಯಿಸಿ ಕೊಟ್ಟಿದ್ದ 87.58 ಮೀಟರ್ ಗಿಂತ ಉತ್ತಮವಾಗಿತ್ತು. ಆದರೆ, ಪಾಕಿಸ್ತಾನದ ಅರ್ಶದ್ ನದೀಮ್ ಸರ್ವಶ್ರೇಷ್ಠ ಒಲಿಂಪಿಕ್ ಪ್ರದರ್ಶನ ನೀಡಿ, 92.97 ಮೀಟರ್ ದೂರ ಜಾವೆಲಿನ್ ಎಸೆದರು. ಈ ಎಸೆತವು ಅವರಿಗೆ ಚಿನ್ನದ ಪದಕವನ್ನು ಗಳಿಸಿ ಕೊಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News