ವಿಶ‍್ವಕಪ್ ಸೆಮಿಫೈನಲ್: ಭಾರತ-ನ್ಯೂಝಿಲ್ಯಾಂಡ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ?; ಇಲ್ಲಿದೆ ಮಾಹಿತಿ

Update: 2023-11-15 06:08 GMT

Photo:X/@BCCI

ಮುಂಬೈ: 2019ರ ವಿಶ‍್ವಕಪ್ ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡವು ಸೆಮಿಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಿತ್ತು. ಮ್ಯಾಂಚೆಸ್ಟರ್ ನಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ನಂತರ ಪಂದ್ಯ ಮುಂದುವರಿದಿತ್ತಾದರೂ, ಮಧ್ಯೆ ಮಧ್ಯೆ ತುಂತುರು ಮಳೆ ಸುರಿದಿದ್ದರಿಂದ ಐಸಿಸಿಯ ಆಟದ ನಿಯಮಗಳ ಪ್ರಕಾರ, ನ್ಯೂಝಿಲ್ಯಾಂಡ್ ತನ್ನ ಇನಿಂಗ್ಸ್ ನ ಇನ್ನೂ 3.5 ಓವರ್ ಗಳ ಆಟವಾಡಲು ಬಾಕಿಯಿದ್ದಾಗ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಮೀಸಲು ದಿನ ಪಂದ್ಯ ಮುಂದುವರಿದಾಗ ಭಾರತ ತಂಡವು 18 ರನ್ ಗಳ ಅಂತರದಲ್ಲಿ ಪರಾಭವಗೊಂಡಿತ್ತು. ನಾಲ್ಕು ವರ್ಷಗಳ ನಂತರ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡಕ್ಕೆ ಮತ್ತೆ ಅಂತಹುದೇ ಪರಿಸ್ಥಿತಿ ಎದುರಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯಕ್ಕೆ ಮತ್ತೆ ಮಳೆ ಕಾಟದ ಭೀತಿ ಎದುರಾಗಲಿದೆಯೆ ಎಂದು ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಆದರೆ, ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿಯಿದೆ, ವಿಶೇಷವಾಗಿ ಈ ಬಹುನಿರೀಕ್ಷಿತ ಹೋರಾಟಕ್ಕೆ ಸಾಕ್ಷಿಯಾಗಲು ವಾಂಖೆಡೆ ಕ್ರೀಡಾಂಗಣಕ್ಕೆ ತೆರಳುತ್ತಿರುವ ಪ್ರೇಕ್ಷಕರಿಗೆ. ಬುಧವಾರದ ಹಮಾಮಾನವು ಶುಭ್ರವಾಗಿದೆ ಎಂದು Accuweather ವರದಿ ಮಾಡಿದ್ದು, “ಹವಾಮಾನವು ಮಸುಕಾದ ಸೂರ್ಯನ ಬೆಳಕಿನೊಂದಿಗೆ ಬೆಚ್ಚಗಿರಲಿದೆ” ಎಂದು ಹೇಳಿದೆ. ವಾಸ್ತವವಾಗಿ ಮಳೆಯಾಗುವ ಸಾಧ್ಯತೆ ಕೇವಲ ಶೇ. 1ರಷ್ಟಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗಿದೆ.

ಹವಾಮಾನ ಮುನ್ಸೂಚನೆ ಏನೇ ಇದ್ದರೂ,ಮಳೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತೆಯೂ ಇಲ್ಲ. ಒಂದು ವೇಳೆ ಮುಂಬೈನಲ್ಲಿ ನಡೆಯಲಿರುವ ಪ್ರಥಮ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ತೊಂದರೆಗೀಡಾದರೆ, ಕಟ್ ಆಫ್ ಸಮಯ ಸಮೀಪಿಸುವವರೆಗೂ ಆರಂಭದಲ್ಲಿ ಓವರ್ ಗಳ ಸಂಖ್ಯೆಯನ್ನು ತಗ್ಗಿಸಲಾಗುತ್ತದೆ. ಆದರೆ, ಮಳೆಯು ಬಿಡುವು ನೀಡದಿದ್ದರೆ ಪಂದ್ಯವನ್ನು ಮೀಸಲು ದಿನವಾದ ಗುರುವಾರಕ್ಕೆ ಮುಂದೂಡಲಾಗುತ್ತದೆ. ಲೀಗ್ ಹಂತದ ಪಂದ್ಯಗಳಿಗೆ ಐಸಿಸಿ ಬಳಿ ಯಾವುದೇ ಮೀಸಲು ದಿನಗಳ ನೀತಿ ಇಲ್ಲದಿದ್ದರೂ, ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳನ್ನು ಮೀಸಲು ದಿನಗಳಿಗೆ ಮುಂದೂಡುವ ಆಯ್ಕೆ ಹೊಂದಿದೆ. ಒಂದು ವೇಳೆ, ಪಂದ್ಯವೇನಾದರೂ ಮೀಸಲು ದಿನಕ್ಕೆ ಮುಂದೂಡಿಕೆಯಾದರೆ, ಹಿಂದಿನ ದಿನ ಯಾವ ಓವರ್ ನಲ್ಲಿ ಪಂದ್ಯ ಸ್ಥಗಿತಗೊಂಡಿತ್ತೊ ಅಲ್ಲಿಂದಲೇ ಪಂದ್ಯ ಮುಂದುವರಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News