ವಿಶ್ವ ಚೆಸ್ ಚಾಂಪಿಯನ್‌ಶಿಪ್ | ಗುಕೇಶ್-ಲಿರೆನ್ 6ನೇ ಪಂದ್ಯವೂ ಡ್ರಾ
ಹೊಸದಿಲ್ಲಿ : ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಆರನೇ ಗೇಮ್‌ನಲ್ಲಿ 18ರ ಹರೆಯದ ಭಾರತದ ಚೆಸ್ ಚತುರ ಡಿ.ಗುಕೇಶ್ ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧ ಮತ್ತೊಮ್ಮೆ ಡ್ರಾ ಸಾಧಿಸಿದರು.
ಸತತ ಮೂರನೇ ಬಾರಿ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದ್ದು, ಉಭಯ ಆಟಗಾರರು ತಲಾ 3 ಪಾಯಿಂಟ್ಸ್ ಪಡೆದಿದ್ದಾರೆ. ಚಾಂಪಿಯನ್‌ಶಿಪ್ ಗೆಲ್ಲಲು ಇನ್ನೂ 4.5 ಪಾಯಿಂಟ್ಸ್ ಗಳಿಸಬೇಕಾಗಿದೆ.
4 ಗಂಟೆಗಳ ಕಾಲ ನಡೆದ ಆರನೇ ಪಂದ್ಯವು 46 ನಡೆಗಳ ನಂತರ ಡ್ರಾನಲ್ಲಿ ಕೊನೆಗೊಂಡಿತು. ಇದೀಗ ನಾಲ್ಕನೇ ಬಾರಿ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಪಂದ್ಯವು ಮುಂದುವರಿದಂತೆ ಆಟಗಾರರ ರಣತಂತ್ರವೂ ಎಲ್ಲರ ಗಮನ ಸೆಳೆದಿದೆ.
32ರ ಹರೆಯದ ಡಿಂಗ್ ಲಿರೆನ್ ಮೊದಲ ಗೇಮ್ ಗೆದ್ದರು. ಗುಕೇಶ್ ಮೂರನೇ ಗೇಮ್‌ನಲ್ಲಿ ಜಯಶಾಲಿಯಾದರು. 2ನೇ, 4ನೇ ಹಾಗೂ 5ನೇ ಗೇಮ್‌ಗಳು ಡ್ರಾನಲ್ಲಿ ಕೊನೆಯಾದವು.
14 ಸುತ್ತುಗಳ ಚಾಂಪಿಯನ್‌ಶಿಪ್‌ನಲ್ಲಿ ಇನ್ನು 8 ಗೇಮ್‌ಗಳು ಬಾಕಿ ಉಳಿದಿವೆ. ಸೋಮವಾರ ವಿರಾಮ ಪಡೆದ ನಂತರ ಹೋರಾಟವು ಮುಂದುವರಿಯಲಿದೆ.