ಲಾರ್ಡ್ಸ್‌ನಲ್ಲಿ 3ನೇ ಆವೃತ್ತಿಯ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್

Update: 2024-09-03 16:42 GMT

PC: ICC

ದುಬೈ : ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಮುಂದಿನ ವರ್ಷದ ಜೂನ್ 11ರಿಂದ 15ರ ತನಕ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಮಂಗಳವಾರ ತಿಳಿಸಿದೆ.

ಅಗತ್ಯವಿದ್ದರೆ ಜೂನ್ 16ರಂದು ಮೀಸಲು ದಿನವಾಗಿರಲಿದೆ ಎಂದು ಐಸಿಸಿ ತಿಳಿಸಿದೆ.

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಒಂದು ಪ್ರಮುಖ ಸ್ಪರ್ಧೆಯಾಗಿದೆ. 2025ರ ಆವೃತ್ತಿಯ ದಿನಾಂಕವನ್ನು ಪ್ರಕಟಿಸಲು ನಮಗೆ ಸಂತೋಷವಾಗುತ್ತಿದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

ಲಾರ್ಡ್ಸ್ ಕ್ರೀಡಾಂಗಣವು ಇದೇ ಮೊದಲ ಬಾರಿ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಆತಿಥ್ಯವಹಿಸುತ್ತಿದೆ. ಈ ಹಿಂದಿನ ಎರಡು ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯಗಳು ಸೌತಾಂಪ್ಟನ್(2021) ಹಾಗೂ ದಿ ಓವಲ್‌ನಲ್ಲಿ(2023)ನಡೆದಿತ್ತು.

ಭಾರತವು ಎರಡೂ ಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಝಿಲ್ಯಾಂಡ್ ಹಾಗೂ ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಸೋತಿತ್ತು.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಭಾರತವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಗಿಂತ ಮುಂದಿದೆ. ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿರುವ ಭಾರತವು ಈ ವರ್ಷಾಂತ್ಯದಲ್ಲಿ ವಿದೇಶದಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News