ಸಿಇಟಿಗೆ ಎಐ ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

Update: 2025-01-23 19:12 IST
ಸಿಇಟಿಗೆ ಎಐ ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸುವ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರದಿಂದ ಆರಂಭಿಸಿದ್ದು, ಮೊದಲ ದಿನವೇ 3,738 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಇದೊಂದು ಹೊಸ ಪ್ರಯತ್ನವಾಗಿದ್ದು, ಕೆಇಎನ ವಿನೂತನ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಈ ಅರ್ಜಿಯನ್ನು ಫೆ.21ರವರೆಗೆ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ವೆಬ್‍ಸೈಟ್‍ನಲ್ಲಿ ಇರುವ ಮಾಹಿತಿ ಪುಸ್ತಕವನ್ನು ಓದಿ, ಮನನ ಮಾಡಿಕೊಂಡ ನಂತರವೇ ಭರ್ತಿ ಮಾಡಬೇಕು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಅವರ ಮಾಹಿತಿ ದುಬರ್ಳಕೆ ತಡೆಯುವ ಉದ್ದೇಶದಿಂದ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಪ್ರತಿಹಂತದಲ್ಲೂ ಓಟಿಪಿ ಹಾಗೂ ಮುಖ ಚಹರೆಯ ದೃಢೀಕರಣದ ನಂತರವೇ ಅರ್ಜಿಗೆ ಲಾಗಿನ್ ಮಾಡಬೇಕಾಗುತ್ತದೆ.

ಎಂಜಿನಿಯರಿಂಗ್ ಅಲ್ಲದೆ, ನೀಟ್(ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‍ಗಳ) ಮೂಲಕ ಪ್ರವೇಶ ಬಯಸುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬೇಕು ಎಂದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು‌ :

* ಅರ್ಜಿ ಸಲ್ಲಿಸುವಾಗ ಇತ್ತೀಚಿನ ಭಾವಚಿತ್ರ ಹಾಗೂ ಸಹಿ-(ಜೆಪಿಜಿ ರೂಪ) ಚಿತ್ರ ಬಿಟ್ಟರೆ ಯಾವುದೇ ಪ್ರಮಾಣ ಪತ್ರ ಅಥವಾ ದಾಖಲೆಗಳನ್ನು ಅಪ್‍ಲೋಡ್ ಮಾಡುವಂತಿಲ್ಲ.

* ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಯಾವ ಮೀಸಲಾತಿಗಳನ್ನು ಪಡೆಯಲು ಬಯಸುತ್ತೀರಿ ಎಂಬುದನ್ನು ಮಾತ್ರ ತಪ್ಪದೇ ಅರ್ಜಿಯಲ್ಲಿ ನಮೂದಿಸಬೇಕು.

* ಮೀಸಲಾತಿ ಪ್ರಮಾಣ ಪತ್ರದಲ್ಲಿನ ಆರ್‌ ಡಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.

* ಅರ್ಜಿ ಭರ್ತಿಗೂ ಮುನ್ನ ಎಸ್ಸೆಸೆ ಲ್ಸಿ ಅಂಕ ಪಟ್ಟಿ, ಮೀಸಲಾತಿ ಪ್ರಮಾಣ ಪತ್ರಗಳ ಪ್ರತಿಗಳನ್ನು ತಮ್ಮೊಡನೆ ಇಟ್ಟುಕೊಂಡಿರಬೇಕು.

* ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್ https://cetonlinekarnatakagovin/kea/ ಗೆ ಭೇಟಿ ನೀಡಿ, ಖಾಲಿ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ತಮ್ಮ ಪೋಷಕರೊಂದಿಗೆ ಸಮಾಲೋಚಿಸಿದ ನಂತರ ಭರ್ತಿ ಮಾಡಬೇಕು.

* ಅರ್ಜಿ ಅಂತಿಮಗೊಳಿಸುವುದಕ್ಕೂ ಮುನ್ನ ಪ್ರಿಂಟ್ ಔಟ್ ತೆಗೆದುಕೊಂಡು ಒಮ್ಮೆ ಓದಬೇಕು.

* ಸಂಪೂರ್ಣವಾದ ಮಾಹಿತಿಗೆ(ಅರ್ಹತೆ ಷರತ್ತುಗಳು, ಶೈಕ್ಷಣಿಕ ಮಾನದಂಡಗಳು, ಇತ್ಯಾದಿ) ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕವನ್ನು ನೋಡುವುದು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News