ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆಸ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ 30 ಪಟ್ಟು ಹೆಚ್ಚಳ

Update: 2024-04-05 06:18 GMT

ಬೆಂಗಳೂರು: ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರ ಆಸ್ತಿ ಮೌಲ್ಯ ಕಳೆದ ಐದು ವರ್ಷಗಳಲ್ಲಿ ಮೂವತ್ತು ಪಟ್ಟು ಹೆಚ್ಚಳಗೊಂಡಿದೆ. 2019ರ ಚುನಾವಣೆಯಲ್ಲಿ ಅವರು ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ತಮ್ಮ ಪ್ರಮಾಣ ಪತ್ರದಲ್ಲಿ ರೂ. 13.46 ಲಕ್ಷ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಐದು ವರ್ಷಗಳ ನಂತರ ಸಂಸದರೂ, ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯರ ಆಸ್ತಿ ಮೌಲ್ಯವು ರೂ. 4.10 ಕೋಟಿಗೆ ಏರಿಕೆಯಾಗಿದೆ.

ತೇಜಸ್ವಿ ಸೂರ್ಯರ ಪ್ರಮಾಣ ಪತ್ರದ ಪ್ರಕಾರ, ಮ್ಯೂಚುಯಲ್‌ ಫಂಡ್ ಹಾಗೂ ಷೇರುಗಳಲ್ಲಿನ ಹೂಡಿಕೆ ಅವರ ಪ್ರಮುಖ ಆದಾಯ ಮೂಲವಾಗಿದೆ. ಅವರು ರೂ. 1.99 ಕೋಟಿಯನ್ನು ಮ್ಯೂಚುಯಲ್‌ ಫಂಡ್‌ಗಳಲ್ಲಿ ತೊಡಗಿಸಿದ್ದರೆ, ರೂ. 1.79 ಕೋಟಿಯನ್ನು ಷೇರುಗಳಲ್ಲಿ ತೊಡಗಿಸಿದ್ದಾರೆ.

ತೇಜಸ್ವಿ ಸೂರ್ಯ ವಿರುದ್ಧ ಮೂರು ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಇತ್ತೀಚೆಗೆ ನಗರ್ತಪೇಟೆಯಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆ ಸಂಬಂಧ ದಾಖಲಾಗಿರುವ ಎರಡು ಪ್ರಕರಣಗಳು ಸೇರಿವೆ.

ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News