ಜಾತಿ ನಿಂದನೆ ಆರೋಪ: ನಟ ಉಪೇಂದ್ರ, ಸಚಿವ ಮಲ್ಲಿಕಾರ್ಜುನ್ ವಿರುದ್ಧ ಕಾನೂನು ಕ್ರಮಕ್ಕೆ ಅಗ್ನಿ ಶ್ರೀಧರ್ ಒತ್ತಾಯ
ಬೆಂಗಳೂರು, ಆ.19: ‘ದಲಿತ ಸಮುದಾಯವನ್ನು ಅವಹೇಳನ ಮಾಡಿದ ನಟ ಉಪೇಂದ್ರ ಹಾಗೂ ತೋಟಗಾರಿಕೆ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ರಾಷ್ಟ್ರೀಯ ದ್ರಾವಿಡ ಸಂಘದ ಸಂಸ್ಥಾಪಕ ಅಗ್ನಿ ಶ್ರೀಧರ್ ಆಗ್ರಹಿಸಿದ್ದಾರೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ‘ಸಿನೆಮಾ ನಟ ಉಪೇಂದ್ರರಿಂದ ಜಾತಿ ನಿಂದನೆ ಸಮರ್ಥನೆ: ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟ ಉಪೆಂದ್ರ ಅವರು ಕೇವಲ ಗಾದೆ ಮಾತನ್ನು ಹೇಳಿಲ್ಲ. ಅದಕ್ಕೆ ಹಿನ್ನೆಲೆಯನ್ನು ಹೇಳಿದ್ದಾರೆ. ಹೊಲಗೇರಿಯ ಜನರನ್ನು ಕೆಟ್ಟ ವ್ಯಕ್ತಿಗಳಂತೆ ಬಿಂಬಿಸಿದ್ದಾರೆ. ಇದು ಆಧುನಿಕ ಕಾಲದಲ್ಲಿಯೂ ಅಸ್ಪøಶ್ಯತೆ ಇದೆ ಎಂದು ಸೂಚಿಸುತ್ತದೆ’ ಎಂದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದಲಿತ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ನೈತಿಕ ಹೊಣೆಯನ್ನು ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಸಿದ್ಧರಾಮಯ್ಯ ಅವರು ತಮ್ಮ ಸಂಪುಟದಿಂದ ಎಸ್.ಎಸ್. ಮಲ್ಲಿಕಾರ್ಜುನರನ್ನು ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
- ಅಗ್ನಿ ಶ್ರೀಧರ್
ದಲಿತ ಮುಖಂಡ ವೆಂಕಟಸ್ವಾಮಿ ಮಾತನಾಡಿ, ‘ದಲಿತರನ್ನು ಅವಹೇಳನ, ಹಲ್ಲೆ ಮಾಡುವವರ ವಿರುದ್ಧ ಪೊಲೀಸರು ಎಫ್‍ಐಆರ್ ಹಾಕಬೇಕು. ಎಫ್‍ಐಆರ್ ದಾಖಲು ಮಾಡದ ಪೊಲೀಸರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ತಕ್ಷಣ ಆರೋಪಿಗಳನ್ನು ಬಂಧನ ಮಾಡಬೇಕು. ಅವರು ಕೋರ್ಟ್‍ಗೆ ಹೋಗಲು ಅವಕಾಶ ನೀಡದಂತೆ ಶಿಕ್ಷೆಯನ್ನು ವಿಧಿಸಬೇಕು’ ಎಂದರು.
ಮಾಜಿ ಸಚಿವೆ ವಿ.ಟಿ.ಲಲಿತಾ ನಾಯ್ಕ್ ಮಾತನಾಡಿ, ‘ಸಚಿವ ಮಲ್ಲಿಕಾರ್ಜುನ ದಲಿತರನ್ನು ಅವಮಾನ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದವರು ಹಾಗೂ ಶ್ರೀಮಂತರು ಎಂಬ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದು ಸಂವಿಧಾನ ವಿರೋಧಿ ನಡೆಯಾಗಿದ್ದು, ಸಚಿವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸರಕಾರವನ್ನು ಒತ್ತಾಯಿಸಿದರು.
ದಲಿತ ಸಮುದಾಯಕ್ಕೆ ನೋವು ಉಂಟು ಮಾಡಿದ ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಮಾತ್ರ ಆಗಬೇಕು. ಆಗ ಸಮಾಜದಲ್ಲಿ ಅರಿವು ಉಂಟಾಗುತ್ತದೆ. ಆಗ ದಲಿತರ ಮೇಲೆ ಹಲ್ಲೆಗಳು ಕಡಿಮೆ ಆಗುತ್ತದೆ. ಇಲ್ಲವಾದಲ್ಲಿ, ನಿರಂತರವಾಗಿ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ ಎಂದು ಅವರು ಹೇಳಿದರು.
ಚಿಂತಕ ಲೋಲಾಕ್ಷ ಮಾತನಾಡಿ, ‘ದಲಿತ ಬಗ್ಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವಹೇಳನ ಹೇಳಿಕೆಯನ್ನು ನೀಡಿದರೂ ಸಿದ್ಧರಾಮಯ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಚಿವರೇ ದಲಿತ ವಿರೋಧಿ ಹೇಳಿಕೆಗಳನ್ನು ನೀಡಿದರೆ, ಇಲಾಖೆ ಅಧಿಕಾರಿಗಳು ದಲಿತರನ್ನು ಯಾವ ರೀತಿ ನೋಡುತ್ತಾರೆ ಎಂದು ಪ್ರಶ್ನಿಸಿದರು.
ದಲಿತ ವಿರೋಧಿ ಹೇಳಿಕೆಗಳನ್ನು ನೀಡಿದರೂ ವಿರೋಧ ಪಕ್ಷ ಬಿಜೆಪಿ ಯಾವುದೇ ವಿರೋಧವನ್ನು ವ್ಯಕ್ತಪಡಿಸುತ್ತಿಲ್ಲ. ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಹೇಳುವ ಆರೆಸೆಸ್, ಸಂಘ ಪರಿವಾರ ಯಾವುದೇ ರೀತಿ ಪ್ರತಿಭಟನೆಯನ್ನು ನಡೆಸುತ್ತಿಲ್ಲ ಎಂದು ಅವರು ತಿಳಿಸಿದರು.
‘ಮೀಸಲಾತಿಯನ್ನು ತೆಗೆಯಬೇಕೆಂದು ಕೆಲವರು ಪಟ್ಟು ಹಿಡಿದಿದ್ದಾರೆ. ಮೀಸಲಾತಿಯನ್ನು ತೆಗೆದರೆ ತಳ ಸಮುದಾಯದಿಂದ ಒಬ್ಬ ಜನಪ್ರತಿನಿಧಿಯೂ ಆಯ್ಕೆಯಾಗುವುದಿಲ್ಲ. ಇಂತಹ ಮನಸ್ಥಿತಿ ನಮ್ಮ ದೇಶದಲ್ಲಿ ಇನ್ನು ಇದೆ. ಮೀಸಲಾತಿಯನ್ನು ವಿರೋಧಿಸುವವರು ಮೀಸಲಾತಿಯ ಪರಿಕಲ್ಪನೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು’
-ಅಗ್ನಿ ಶ್ರೀಧರ್, ರಾಷ್ಟ್ರೀಯ ದ್ರಾವಿಡ ಸಂಘದ ಸಂಸ್ಥಾಪಕ