ಅಕ್ರಮ ಚಿನ್ನಸಾಗಾಟ ಪ್ರಕರಣ | ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ

Update: 2025-03-08 21:11 IST
ಅಕ್ರಮ ಚಿನ್ನಸಾಗಾಟ ಪ್ರಕರಣ | ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ

ರನ್ಯಾ ರಾವ್ 

  • whatsapp icon

ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಆರೋಪ ಪ್ರಕರಣ ಸಂಬಂಧ ಚಲನಚಿತ್ರ ನಟಿ ಹಾಗೂ ರಾಜ್ಯ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾ ರಾವ್ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿಕೊಂಡಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ನಿರ್ದೇಶನದ ಮೇರೆಗೆ ಸಿಬಿಐ ಇಂದು ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಮತ್ತಿತರ ಕಡೆ ರನ್ಯಾ ರಾವ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ.

ಡಿಆರ್‌ಐ ತನಿಖೆ ವೇಳೆ ತಾನು ಕಳೆದ ವರ್ಷ ಒಟ್ಟು 30 ಬಾರಿ ದುಬೈಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದರು. ಅದರಲ್ಲೂ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ವಿದೇಶಿ ಪ್ರವಾಸ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರತಿಬಾರಿ ದುಬೈಗೆ ಪ್ರಯಾಣಿಸುತ್ತಿದ್ದ ವೇಳೆ ರನ್ಯಾ ರಾವ್ ಕೆಜಿಗಟ್ಟಲೇ ಚಿನ್ನವನ್ನು ತರುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕೈವಾಡವಿದೆ ಎಂಬ ಶಂಕೆ ಹಿನ್ನೆಲೆ ಸಿಬಿಐ ಮೊಕದ್ದಮೆ ದಾಖಲಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ಬಳಿಕ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಮಾರ್ಗಸೂಚಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ವಿಶೇಷವಾಗಿ, ಪ್ರಭಾವಿ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಕಠಿಣ ಭದ್ರತಾ ಶಿಷ್ಟಾಚಾರಗಳನ್ನು ಪರಿಚಯಿಸಲಾಗಿದೆ.

ಶಿಷ್ಟಾಚಾರ ಸವಲತ್ತುಗಳನ್ನು ಹಿರಿಯ ಅಧಿಕಾರಿಗಳಿಗೆ ಮಾತ್ರ ನೀಡಲಾಗುವುದು. ಅವರ ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರಿಗೆ ನೀಡಲಾಗುವುದಿಲ್ಲ ಎಂದು ಸರಕಾರದ ಸ್ಪಷ್ಟಪಡಿಸಿದೆ.

ಅದರಲ್ಲೂ ನಿಯೋಜಿತ ಅಧಿಕಾರಿ ಐಪಿಎಸ್ ಆಗಿರಲಿ ಅಥವಾ ಐಎಎಸ್ ಆಗಿರಲಿ, ಅವರನ್ನು ಬಿಟ್ಟು ಅವರ ಕುಟುಂಬದವರಾಗಲೀ, ಇತರ ಯಾರಿಗೇ ಆಗಲಿ ಭದ್ರತಾ ಶಿಷ್ಟಾಚಾರವನ್ನು ಒದಗಿಸಲು ಅವಕಾಶವಿಲ್ಲ. ಅಧಿಕಾರಿಗೆ ನೇರ ಬೆದರಿಕೆ ಇದ್ದಾಗ ಮಾತ್ರ ಹೆಚ್ಚುವರಿ ಭದ್ರತೆಯನ್ನು ಪರಿಗಣಿಸಲಾಗುತ್ತದೆ. ಅಂಥ ಸಂದರ್ಭದಲ್ಲೂ ಅವರ ಅತೀ ಹತ್ತಿರದ ಸಂಬಂಧಿಗಷ್ಟೇ ಒದಗಿಸಲಾಗುತ್ತದೆ ಎದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News