ಇಕನಾಮಿಕ್ ಸರ್ವೇ ಬಯಲು ಮಾಡಿರುವ ಮೋದಿ ಬೊಗಳೆಗಳು

Update: 2024-07-23 04:45 GMT
Editor : Thouheed | Byline : ಶಿವಸುಂದರ್

ಮೋದಿ ಸರಕಾರ ಸಂಪ್ರದಾಯದಂತೆ ಬಜೆಟ್ ಮಂಡಿಸುವ ಹಿಂದಿನ ದಿನ ತನ್ನದೇ ಆರ್ಥಿಕ ಸಲಹೆಗಾರರು ಸಿದ್ಧಪಡಿಸಿರುವ Ecomonic Survey 2023-24 ಅನ್ನು ಬಿಡುಗಡೆ ಮಾಡಿದೆ. ಇದು ನಾಳಿನ ಬಜೆಟ್ ಹೇಗಿರಬಹುದು ಎಂಬುದಕ್ಕೆ ಮುನ್ಸೂಚನೆ ಮತ್ತು ಕಳೆದ ವರ್ಷ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬ ವಿವರ/ವಿಶ್ಲೇಷಣೆ ಮತ್ತು ಬರಲಿರುವ ವರ್ಷ ಹೇಗಿರಲಿದೆ ಎಂಬುದರ ಅಂದಾಜು ನೀಡುತ್ತದೆ.

ಆದರೆ ಈ ಸರ್ವೇ ಇದುವರೆಗೆ ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿದ್ದ ಬೊಗಳೆಗಳು ಎಷ್ಟು ಸುಳ್ಳೆಂದು ಬಯಲು ಮಾಡಿದೆ. ಆದರೆ ಇದನ್ನು ಕೂಡಾ ಇದೇ ಸರಕಾರದ ಪರಿಣಿತರೇ ಸಿದ್ಧಪಡಿಸಿರುವುದರಿಂದ ಈ ಸತ್ಯವನ್ನು ಮೋದಿ ಸರಕಾರ ಪ್ರಕಟಿಸಿರುವುದರ ಹಿಂದೆ ಯಾವ ವಿಕಸಿತ ತಂತ್ರವಿದೆ ಎಂಬುದನ್ನು ಹುಡುಕುತ್ತಲೇ ಸರ್ವೇ ಬಯಲು ಮಾಡಿರುವ ಮೋದಿ ಬೊಗಳೆಗಳನ್ನು ಗಮನಿಸೋಣ :

ಮುಖ್ಯವಾಗಿ 1) ಉದ್ಯೋಗ ಸೃಷ್ಟಿ 2) ರೈತಾಪಿ ಮತ್ತು ಕೃಷಿಯ ಭವಿಷ್ಯ 3) ಖಾಸಗಿ ಕಾರ್ಪೊರೇಟ್ ಹೂಡಿಕೆ .. ಈ ಮೂರು ವಿಷಯಗಳಲ್ಲಿ ಮೋದಿ ಸರಕಾರ ಹೇಳುತ್ತಾ ಬಂದಿರುವುದಕ್ಕೂ ಸರ್ವೇ ಹೇಳಿರುವ ಸತ್ಯಗಳಿಗೂ ವ್ಯತ್ಯಾಸ ಗಮನಿಸಿ :

► 1. ಉದ್ಯೋಗ ಸೃಷ್ಟಿಯಾಗುತ್ತಿಲ್ಲ

ಮೋದಿ ಸರಕಾರವು ಮೊನ್ನೆ ತಾನೇ ತನ್ನ RBI ಹಾಗೂ SBIಮೂಲಕ 2013-22 ರ ಅವಧಿಯಲ್ಲಿ 12 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಅದರಲ್ಲೂ ಒಚಿಟಿuಜಿಚಿಛಿಣuಡಿiಟಿg ವಲಯದಲ್ಲೇ 2019 ರ ನಂತರ 4-5 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕೊಚ್ಚಿಕೊಂಡಿತ್ತು.

ಆದರೆ Ecomonic Survey 2023-24 ರ ಪ್ರಕಾರ:

"The lack of availability of timely data on the absolute number of (formal and informal) jobs created even at annual intervals, let alone at higher frequencies, in various sectors - agriculture, industry including manufacturing and services - precludes an objective analysis of the labour market situation in the country."

ಅಂದರೆ : ಕೃಷಿ, ಮ್ಯಾನುಫ್ಯಾಕ್ಚರಿಂಗ್ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂಬ ಅಂಕಿಅಂಶಗಳು ಲಭ್ಯವಿಲ್ಲದಿರುವುದರಿಂದ ಲೇಬರ್ ಮಾರುಕಟ್ಟೆಯ ವಾಸ್ತವಿಕ ವಿಶ್ಲೇಷಣೆ ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.

ಹಾಗಿದ್ದಲ್ಲಿ RBI ಹಾಗೂ SBIಮೂಲಕ ಮೋದಿ

ಸರಕಾರ 12 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದ್ದು ಬೊಗಳೆ ತಾನೇ?

ಅಷ್ಟು ಮಾತ್ರವಲ್ಲ, ಸರಕಾರ ತಾನು ಪ್ರತೀ ವರ್ಷ ನಡೆಸುವ 2 ಲಕ್ಷ ಕಾರ್ಖಾನೆಗಳ ಅಧ್ಯಯನವನ್ನು ಕೂಡ ಸರ್ವೇಯಲ್ಲಿ ಮುಂದಿಟ್ಟಿದೆ. ಅದರ ಪ್ರಕಾರ ಈ ಕಾರ್ಖಾನೆಗಳಲ್ಲಿ ಉದ್ಯೋಗದ ಸಂಖ್ಯೆ ಏರಿದ್ದು ಕೇವಲ ಶೇ. 3.6 ರ ಗತಿಯಲ್ಲಿ ಮಾತ್ರ. ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಸಣ್ಣ ಮತ್ತು ಅತಿಸಣ್ಣ ಮತ್ತು ಮಧ್ಯಮ ಗಾತ್ರದ (MSME)) ಕಾರ್ಖಾನೆಗಳಲ್ಲಿ ಉದ್ಯೋಗದ ಏರಿಕೆಯ ಗತಿ ಕೇವಲ ಶೇ. 1.2.

ಒಟ್ಟಾರೆಯಾಗಿ ಈ ಸರ್ವೇಯ ಪ್ರಕಾರ ಲಭ್ಯವಿರುವ ಕಾರ್ಖಾನೆಗಳ ಅಂಕಿಅಂಶದಲ್ಲಿ 2013ರಲ್ಲಿ 1.04 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದ್ದರೆ 2023 ಅದರ ಸಂಖ್ಯೆ 1.36 ಕೋಟಿ ಆಯಿತಷ್ಟೆ. ಅಂದರೆ ಹೆಚ್ಚಾದದ್ದು ಕೇವಲ 32 ಲಕ್ಷ ಉದ್ಯೋಗಗಳು ಮಾತ್ರ. 4 ಕೋಟಿಯೂ ಅಲ್ಲ , 12 ಕೋಟಿ ಹೆಚ್ಚುವರಿ ಉದ್ಯೋಗಗಳೂ ಅಲ್ಲ.

ಇದೇ ಅವಧಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರ (ಪಕೋಡ ವಲಯದ ಉದ್ಯೋಗಗಳನ್ನೂ ಸೇರಿಸಿ ) ಸಂಖ್ಯೆ 11.1 ಕೋಟಿಯಿಂದ 10.96 ಕೋಟಿಗೆ ಇಳಿಯಿತೆಂದು ಕೂಡ ಇದೆ ಸರ್ವೇ ಒಪ್ಪಿಕೊಳ್ಳುತ್ತದೆ. ಅಂದರೆ ಅಸಂಘಟಿತ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದಿರಲಿ, ಮೋದಿ ಅವಧಿಯಲ್ಲಿ 16 ಲಕ್ಷ ಉದ್ಯೋಗಗಳು ಕಡಿತವಾದವು.

ಹಾಗಿದ್ದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಿದೆ ಎಂಬ ಮೋದಿ ಸರಕಾರದ ಮತ್ತು SBI, RBI ಅಂಕಿಸಂಖ್ಯೆಗಳೆಲ್ಲ ಬೊಗಳೆಗಳೇ ಅಂತಾಗಲಿಲ್ಲವೇ?

► 2. ಕೃಷಿ: ಹಿಂಬಾಗಿಲಿಂದ ಕೃಷಿಯ ಕಾರ್ಪೊರೇಟೀಕರಣದ ಸೂಚನೆಗಳು

ಮೋದಿ ಅವಧಿಯಲ್ಲಿ ನಿರುದ್ಯೋಗದಷ್ಟೇ ಭಾರತ ಎದುರಿಸುತ್ತಿರುವ ಮತ್ತೊಂದು ಅತಿ ದೊಡ್ಡ ಬಿಕ್ಕಟ್ಟು ಕೃಷಿ ಕ್ಷೇತ್ರದ್ದು. ಅದರ ಬಗ್ಗೆ ಇಕನಾಮಿಕ್ ಸರ್ವೇ ಅತ್ಯಂತ ಸ್ಪಷ್ಟವಾಗಿ ಕಾರ್ಪೊರೇಟೀಕರಣದ ಮುನ್ಸೂಚನೆ ಕೊಡುತ್ತಿದೆ.

ಕೃಷಿ ಕ್ಷೇತ್ರಕ್ಕೆ ಕೊಡುತ್ತಿರುವ ರಿಯಾಯಿತಿ ಮತ್ತು ವಿನಾಯಿತಿಗಳ ಪಟ್ಟಿಯನ್ನು ಕೊಡುವ ಸರ್ವೇ ಅಷ್ಟಾದರೂ ಕೃಷಿಕರ ಅಭಿವೃದ್ಧಿ ಸಾಧಿಸದೆ ಇರುವುದಕ್ಕೆ ಕಾರಣ ಹಳೆಯ ಕಾರ್ಬೊಹೈಡ್ರೇಟ್ ಮತ್ತು ಶುಗರ್ ಹೆಚ್ಚಿರುವ ಧಾನ್ಯಗಳ ಉತ್ಪಾದನೆ ಮತ್ತು ಉತ್ಪಾದನಾ ಪದ್ಧತಿ. ಅದರ ಬದಲಿಗೆ ಪ್ರೊಟೀನ್ ಮತ್ತು ಫೈಬರ್ ಹೆಚ್ಚಿರುವ ಹಾಗೂ ಭಾರತದ ಸನಾತನ ಆಹಾರಾಭ್ಯಾಸಗಳಿಗೆ ಮರಳುವಂತೆ ಕೃಷಿಯನ್ನು ಪುನರ್ ರೂಪಿಸಬೇಕು ಎಂದು ಘೋಷಿಸುತ್ತದೆ.

ಅಷ್ಟು ಮಾತ್ರವಲ್ಲದೆ, ಈ ಹಿಂದಿನಂತೆ ಕೃಷಿಯಲ್ಲಿ ಹೆಚ್ಚು ಉತ್ಪಾದಕತೆ ಇರುವುದರಿಂದ ಅಲ್ಲಿನ ಹೆಚ್ಚುವರಿ ಕಾರ್ಮಿಕರು ನಗರದ ಫ್ಯಾಕ್ಟರಿ ಮತ್ತು ಸೇವಾ ಕಾರ್ಮಿಕರಾಗಿ ಬದುಕು ಕಂಡುಕೊಳ್ಳುತ್ತಿದ್ದರು. ಆದರೆ ಈಗ ಸೇವಾ

ಮತ್ತು ಮ್ಯಾನುಫ್ಯಾಕ್ಚರಿಂಗ್ ವಲಯ ಹೆಚ್ಚು ಬಂಡವಾಳ ಸಾಂದ್ರಿತ ಮತ್ತು ತಂತ್ರಜ್ಞಾನ ಆಧಾರಿತ ವಲಯವಾಗುತ್ತಿರುವುದರಿಂದ ಅಲ್ಲಿ ಉದ್ಯೋಗಗಳು ಇನ್ನು ಮುಂದೆ ಸೃಷ್ಟಿಯಾಗದು ಎಂದು ಸ್ಪಷ್ಟಪಡಿಸಿದೆ. ಅರ್ಥಾತ್ ಸರಕಾರವು ಅಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ರೀತಿ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎನ್ನುವ ಸಲಹೆಯನ್ನೂ ಕೊಟ್ಟಿಲ್ಲ.

ಅದರ ಬದಲಿಗೆ:

A return to roots, as it were, in terms of farming practices and policymaking, can generate higher value addition from agriculture, boost farmers income, create opportunities for food processing and exports and make the farm sector both fashionable and productive for India’s urban youth

ಅಂದರೆ ಆಹಾರ ಸಂಸ್ಕರಣಾ ಮತ್ತು ಮೌಲ್ಯವರ್ಧಿತ ರಫ್ತ್ತು ಆಧಾರಿತ ವಲಯವನ್ನಾಗಿ ಕೃಷಿಯನ್ನು ಪರಿವರ್ತಿಸುವ ಮೂಲಕ ಕೃಷಿಯನ್ನು ಆಕರ್ಷಕಗೊಳಿಸುವ ಸಲಹೆಯನ್ನು ಮಾಡಿದೆ. ಹೀಗಾಗಿ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲೂ ಖಾಸಗಿ ಕಾರ್ಪೊರೇಟ್ ಬಂಡವಾಳದ ಹಿಂಬಾಗಿಲ ವಾಪಸಾತಿಯನ್ನು ಕಾಣಬಹುದು.

► 3. ಲಾಭಕೋರ ಕಾರ್ಪೊರೇಟ್ ಕಂಪೆನಿಗಳು ಸಂಪತ್ತು ಹೆಚ್ಚಾದರೂ ಹೂಡಿಕೆ ಮಾಡುತ್ತಿಲ್ಲ

ಭಾರತದ ಆರ್ಥಿಕತೆಯ ಇಂಜಿನ್ ಖಾಸಗಿ ಕಾರ್ಪೊರೇಟ್ ವಲಯ ಎಂದು ಮೋದಿ ಹಾಗೂ ವಿರೋಧ ಪಕ್ಷಗಳೆಲ್ಲರ ಸರ್ವ ಸಮ್ಮತ ಅಭಿಪ್ರಾಯ. ಮೋದಿ ಈ ನಿಟ್ಟಿನಲ್ಲಿ ಹತ್ತು ಹಲವು ಹೆಜ್ಜೆ ಮುಂದಕ್ಕೆ ಹೋಗಿ ಸಾಮಾನ್ಯ ಜನರ ಮೇಲಿನ ತೆರಿಗೆ ಜಾಸ್ತಿ ಮಾಡಿ 2018 ರಲ್ಲಿ ಕಾರ್ಪೊರೇಟ್ ತೆರಿಗೆಗಳನ್ನು ಕಡಿಮೆ ಮಾಡಿತು. ಇದರಿಂದ ಕೇವಲ ಎರಡು ವರ್ಷಗಳಲ್ಲಿ ಭಾರತದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂ. ಖೋತಾ ಆಯಿತು.

ಆದರೆ ಉಳಿತಾಯವಾದ ಹಣವನ್ನು ಈ ಖಾಸಗಿ ಕಾರ್ಪೊರೇಟ್‌ಗಳು ಹೂಡಿಕೆ ಮಾಡಿದರೆ? ಸ್ಪಷ್ಟವಾಗಿ ಇಲ್ಲ ಎನ್ನುತ್ತದೆ ಇಕನಾಮಿಕ್ ಸರ್ವೇ.

ಸರ್ವೇಯ ಪ್ರಕಾರ 2020-23 ರಲ್ಲಿ 33,000 ಕಂಪೆನಿಗಳ ತೆರಿಗೆಯ ಮುಂಚಿನ ಲಾಭದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಯಿತು. Niftyಯಲ್ಲಿ ನೋಂದಾಯಿತವಾದ ಕೇವಲ 500 ಕಂಪೆನಿಗಳ ಲಾಭವೇ 2023ರಲ್ಲಿ ರೂ.10 ಲಕ್ಷ ಕೋಟಿಯಿದ್ದದ್ದು ಈ ಸಾಲಿನಲ್ಲಿ 14.11 ಲಕ್ಷ ಕೋಟಿಗೇರಿದೆ.

ಆದರೆ ಆ ಲಾಭದಲ್ಲಿ ಬಹು ಅಂಶವನ್ನು ಈ ಕಂಪೆನಿಗಳು ಕಾರ್ಮಿಕರನ್ನು ಭರ್ತಿ ಮಾಡಿಕೊಳ್ಳಲು, ಯಂತ್ರಗಳನ್ನು ಖರೀದಿ ಮಾಡಲು, ಸಂಶೋಧನೆಗ ವೆಚ್ಚ ಮಾಡುವುದಕ್ಕಿಂತ ಕಟ್ಟಡ, ಮನೆ ಇತರ ಸಂಪತ್ತಿನ ಮೇಲೆ ವೆಚ್ಚ ಮಾಡುತ್ತಿವೆ.

ಅರ್ಥಾತ್ ಖಾಸಗಿ ಕಾರ್ಪೊರೇಟ್ ವಲಯವೂ ದೇಶದ ಅಭಿವೃದ್ಧಿಗೂ ಪೂರಕವಾಗಿಲ್ಲ. ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ.

ಇವಿಷ್ಟು ಇಕನಾಮಿಕ್ ಸರ್ವೇಯು ಕೇವಲ ಮೂರು ಮುಖ್ಯ ಬಾಬತ್ತುಗಳಲ್ಲಿ ಮೋದಿ ಸರಕಾರ ಮಾಡುತ್ತಿರುವ ಬೊಗಳೆಗಳನ್ನು ಅನುದ್ದಿಶ್ಯಪೂರ್ವಕವಾಗಿ ಬಯಲಿಗೆಳೆದಿರುವ ರೀತಿ.

ಆದರೆ ನಾಳಿನ ಬಜೆಟ್‌ನಲ್ಲಿ ಇದರಿಂದ ಮೋದಿ ಸರಕಾರ ಕಲಿತು ಬದಲಿಸಿಕೊಳ್ಳಬಹುದಾದ ನೀತಿಗಳೇನಾದರೂ ಇವೆಯೇ?

ಅಂಥ ನಿರೀಕ್ಷೆ ದುರಾಸೆಯಾದೀತು. ಏಕೆಂದರೆ ಈ ಸರ್ವೇಯು ಕಾರ್ಪೊರೇಟ್ ಗಳಿಗೆ ಹೂಡಿಕೆ ಮಾಡಿ ಉದ್ಯೋಗ ಹೆಚ್ಚಿಸುವ ಉದ್ಯಮಗಳನ್ನು ಪ್ರಾರಂಭಿಸಲು ಸಲಹೆ ಮಾಡಿಲ್ಲ. ಬದಲಿಗೆ ಅವರ CSR ನಿಧಿಯಿಂದ ಯುವಕರ ಕೌಶಲ್ಯ ಹೆಚ್ಚಿಸಲು ಮನವಿ ಮಾಡಿದೆಯಷ್ಟೆ.

ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಗುರುತಿಸಿದರೂ. ಆರ್ಥಿಕತೆಯನ್ನು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರಗಳತ್ತ ಆದ್ಯತೆಗೊಳಿಸುವಂತೆ ಸಲಹೆ ಮಾಡುವುದರ ಬದಲು ಮತ್ತೆ ನಿರುದ್ಯೋಗದ ಹೊಣೆಯನ್ನು ಯುವಜನರ ಕೌಶಲ್ಯ ಕೊರತೆಯ ಮೇಲೆ ವರ್ಗಾಯಿಸಿದೆ. ಹೀಗಾಗಿ ಬಜೆಟ್‌ನಲ್ಲೂ ಕೌಶಲ್ಯ ವರ್ಧನೆಯ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುವುದೇ ವಿನಾ ಉದ್ಯೋಗ ಸಾಂದ್ರಿತ ಉದ್ಯಮಗಳಿಗೆ ಒತ್ತು ಕೊಡುವುದರ ಬಗ್ಗೆಯಲ್ಲ. ಹಾಗೆಯೇ ಕೃಷಿಯಲ್ಲಿ ಈಗಾಗಲೇ ಹೇಳಿದಂತೆ ಹಿಂಬಾಗಿಲಿಂದ ಕಾರ್ಪೊರೇಟೀಕರಣದ ನೆರಳುಗಳು ಕಾಣಿಸಿಕೊಳ್ಳಬಹುದು.

ಇದು ಕಾಂಗ್ರೆಸ್ ಪ್ರಾರಂಭಿಸಿ, ಬಿಜೆಪಿ ಉಗ್ರವಾಗಿ ಮತ್ತು ಆಕ್ರಮಣಕಾರಿಯಾಗಿ ಮುಂದುವರಿಸಿರುವ ಕಾರ್ಪೊರೇಟ್ ಬಂಡವಾಳಶಾಹಿ ನವ ಉದಾರವಾದಿ ಆರ್ಥಿಕತೆಯ ಪರಿಣಾಮ. ಸಮಸ್ಯೆಯ ಮೂಲ ಇದು. ಇದು ಬದಲಾಗದೆ ಪ್ರತೀ ಬಜೆಟ್ ಏನೋ ಪರಿಹಾರ ಕೊಡುತ್ತದೆ ಎಂದು ಭ್ರಮೆಯಲ್ಲಿಡುವುದೇ ಮೋದಿತ್ವದ ಸಾರ.

ಈ ಇಕನಾಮಿಕ್ ಸರ್ವೇಯು ಅದನ್ನೇ ರುಜುವಾತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News